ಕರಡಿಗುದ್ದಿಯಲ್ಲಿ ಉಚಿತ ಕಾನೂನು ಅರಿವು ಮತ್ತು ನೆರವು ಶಿಬಿರ

ಕರಡಿಗುದ್ದಿಯಲ್ಲಿ ಉಚಿತ ಕಾನೂನು ಅರಿವು ಮತ್ತು ನೆರವು ಶಿಬಿರ  Free Legal Awareness and Aid Camp at Karadiguddi

ಬೆಳಗಾವಿ 02: ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ, ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರಡಿಗುದ್ದಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಕರಡಿಗುದ್ದಿ ಗ್ರಾಮದಲ್ಲಿ ಉಚಿತ ಕಾನೂನು ಅರಿವು ಮತ್ತು ನೆರವು ಶಿಬಿರ ಆಯೋಜಿಸಲಾಯಿತು.  

ಜನರಲ್ಲಿ ಕಾನೂನಿನ ಕುರಿತು ಸರಿಯಾದ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಕಾನೂನು ತಿಳಿವಳಿಕೆಯ ಕೊರತೆಯಿಂದ ಅನೇಕರು ನ್ಯಾಯ ವ್ಯವಸ್ಥೆಯ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಕಾನೂನು ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ಹಿರಿಯ ದಿವಾನಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್‌. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.  

ಮಾರಿಹಾಳ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ಕೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನ್ಯಾಯವಾದಿ ಪ್ರತಿಮಾ ಜೋಶಿ ಅವರು ಮಹಿಳೆಯರ ಹಕ್ಕುಗಳು, ವರದಕ್ಷಿಣೆ ನಿಷೇಧ ಕಾಯ್ದೆ, ಸಮಾನ ವೇತನ ಕಾಯ್ದೆ, ಉಚಿತ ಕಾನೂನು ನೆರವು ಹಾಗೂ ಕೌಟುಂಬಿಕ ಹಿಂಸೆ ತಡೆ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಕುರಿತು ಮಾಹಿತಿ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಡಿ. ಪ್ರಸನ್ನ ಕುಮಾರ್ ಅವರು ಉಚಿತ ಕಾನೂನು ನೆರವು ಯೋಜನೆಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಸಂಯೋಜಕ ಚೇತನ್ ಕುಮಾರ್ ಟಿ.ಎಂ. ಅವರ ಮಾರ್ಗದರ್ಶನದಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಿತು.  

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕಾಂತ್ ಸಿ.ಎಂ., ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ನೇಸರ್ಗಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಪ್ಪ ನೇಸರ್ಗಿ, ಸಹಾಯಕ ಪ್ರಾಧ್ಯಾಪಕ ಪ್ರೀತಮ್ ರೇವಣಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಶಿಬಿರದಲ್ಲಿ ಭಾಗವಹಿಸಿದ ಸಾರ್ವಜನಿಕರು ತಮ್ಮ ಕಾನೂನು ಹಕ್ಕುಗಳ ಕುರಿತು ಸಮಗ್ರ ಮಾಹಿತಿ ಪಡೆದು, ಅಗತ್ಯವಿದ್ದಲ್ಲಿ ಉಚಿತ ಕಾನೂನು ನೆರವನ್ನು ಪಡೆಯುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.  

ಮೂರನೇ ವರ್ಷದ ಕಾನೂನು ವಿದ್ಯಾರ್ಥಿನಿ ಸಂಜನಾ ಇಟಗಿ ಕಾರ್ಯಕ್ರಮ ನಿರೂಪಿಸಿದರು. ಕಾನೂನು ನೆರವು ಕೇಂದ್ರದ ವಿದ್ಯಾರ್ಥಿ ಕಾರ್ಯದರ್ಶಿ ಸಚಿನ್ ಕೋಟಗಿ ವಂದಿಸಿದರು. ಶಶಿಧರ ಸಸಾಲಟ್ಟಿ ಹಾಗೂ ಪ್ರವೀಣ್ ಕಾಂಬಳೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.