ಬಳ್ಳಾರಿ ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು: 0.75 ಸೆಂಟ್ಸ್‌ ಜಾಗ ವಶಕ್ಕೆ,ಕಠಿಣ ಕ್ರಮದ ಎಚ್ಚರಿಕೆ

ಬಳ್ಳಾರಿ ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು: 0.75 ಸೆಂಟ್ಸ್‌ ಜಾಗ ವಶಕ್ಕೆ,ಕಠಿಣ ಕ್ರಮದ ಎಚ್ಚರಿಕೆ  Encroachment on government land cleared in Ballari city: 0.75 cents of land reclaimed; warning of st

ಲೋಕದರ್ಶನ ವರದಿ

ಬಳ್ಳಾರಿ 02:  ನಗರ ಹಾಗೂ ಸುತ್ತಮುತ್ತಲಿನ ವಾರ್ಡ್ಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳನ್ನು ಪತ್ತೆಹಚ್ಚಿ, ಜಿಲ್ಲಾ ಆಡಳಿತವು ತೆರವು ಕಾರ್ಯಾಚರಣೆ ಆರಂಭಿಸಿದೆ.  

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ರುಬೆರ್ ಎನ್‌., ಸಹಾಯಕ ಆಯುಕ್ತ ರಾಜೇಶ್ ಹೆಚ್‌.ಡಿ. ಹಾಗೂ ತಹಶೀಲ್ದಾರ್ ಟಿ. ರೇಖಾ ನೇತೃತ್ವದ ಅಧಿಕಾರಿಗಳ ತಂಡ ನಗರದಲ್ಲಿ ವಿವಿಧ ವಾರ್ಡ್ಗಳಲ್ಲಿ ಪರೀಶೀಲನೆ ನಡೆಸಿತು.  

ಪರೀಶೀಲನೆಯ ವೇಳೆ ಸಿಟಿಎಸ್ ವಾರ್ಡ್‌ ನಂ.21, ಬ್ಲಾಕ್ ನಂ.03, ಟಿಎಸ್ ನಂ.41 ರಲ್ಲಿರುವ 0.08 ಸೆಂಟ್ಸ್‌ ಜಾಗವನ್ನು ಅಂಗಳವಾಡಿ ಕೇಂದ್ರಕ್ಕಾಗಿ ಗುರುತಿಸಿ ವಶಕ್ಕೆ ಪಡೆಯಲಾಗಿದೆ. ಅದೇ ಸ್ಥಳದಲ್ಲಿ ಅಕ್ರಮ ಒತ್ತುವರಿ ಪತ್ತೆಯಾಗಿದ್ದು, ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.  

ವಾರ್ಡ್‌ ನಂ.22, ಬ್ಲಾಕ್ ನಂ.11, ಟಿಎಸ್ ನಂ.94 ರಲ್ಲಿ ಸುಮಾರು 0.49.6 ಸೆಂಟ್ಸ್‌ ಹಾಗೂ ವಾರ್ಡ್‌ ನಂ.21, ಬ್ಲಾಕ್ ನಂ.03, ಟಿಎಸ್ ನಂ.43 ರಲ್ಲಿ 0.75 ಸೆಂಟ್ಸ್‌ ಸರ್ಕಾರಿ ಜಾಗವನ್ನು ಕಾನೂನು ಪ್ರಕಾರ ಗುರುತಿಸಿ ವಶಕ್ಕೆ ಪಡೆಯಲಾಗಿದೆ.  

ಬುಡಾ ಪಾರ್ಕ, ನಾರಾಯಣಪ್ಪ ಕಾಂಪೌಂಡ್, ಕೋಟೆ ಪ್ರದೇಶ ಹಾಗೂ ಸಿದ್ಧಾರ್ಥ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಪರೀಶೀಲನೆ ನಡೆಸಲಾಗಿದ್ದು, ಸರ್ಕಾರಿ ಜಾಗಗಳ ರಕ್ಷಣೆಗೆ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.  

ಸರ್ಕಾರಿ ಆಸ್ತಿಯನ್ನು ಸಾರ್ವಜನಿಕ ಹಿತಕ್ಕಾಗಿ ಕಾಯ್ದಿರಿಸಲಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.  

ತೆರವು ಕಾರ್ಯಾಚರಣೆಯಲ್ಲಿ ಡಿಡಿಎಲ್‌ಆರ್ ಪ್ರಮೋದ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ. ಖಲೀಲ್ ಸಾಬ್ ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.