ಗಡಿ ಭಾಗದಲ್ಲಿ ಉಚಿತ ಕನ್ನಡ ವಸತಿ ಶಾಲೆಗಳಾಗಬೇಕು: ಡಾ. ಬಾಬು ಬೆಣ್ಣಿ

ಗಡಿ ಭಾಗದಲ್ಲಿ ಉಚಿತ ಕನ್ನಡ ವಸತಿ ಶಾಲೆಗಳಾಗಬೇಕು: ಡಾ. ಬಾಬು ಬೆಣ್ಣಿ Free Kannada residential schools should be established in the border areas: Dr. Babu Benny

ಲೋಕದರ್ಶನ ವರದಿ 

ಧಾರವಾಡ 02: ‘ವಿಶ್ವದ ಲಿಪಿಗಳ ರಾಣಿ ಕನ್ನಡ’ ಎಂದು ವಿನೋಬಾ ಭಾವೆ ಹೇಳಿದ್ದರು. ಈಗ ಜನಸಂಖ್ಯೆ 3 ಪಟ್ಟು ಹೆಚ್ಚಾಗಿದೆ. ಮಕ್ಕಳು ಎಲ್ಲ ಭಾಷೆ ಕಲಿಯಿರಿ, ಕನ್ನಡ ಮಾತೃಭಾಷೆ ಬಳಸಲಿ. ನಮ್ಮತನವನ್ನು ಕಾಯ್ದುಕೊಳ್ಳಲಿ ಎಂದು ಡಾ. ಬಾಬು ಬೆಣ್ಣಿ ಅಭಿಪ್ರಾಯಪಟ್ಟರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಹಾಗೂ ಕ್ರೀಡಾ ಮಂಟಪ ಹಾಗೂ ಎಮ್ ಕೆ ಹುಬ್ಬಳ್ಳಿ ಶ್ರೀ ಕಲ್ಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಚಿಂತನ ಮಂಥನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ‘ಜಾಗತೀಕರಣ ಹಾಗೂ ಕನ್ನಡ’ ವಿಷಯ ಕುರಿತು ಉಪನ್ಯಾಸ ನೀಡುತಾ ಮಾತನಾಡುತ್ತಿದ್ದರು.  

ಉದಾರೀಕರಣ, ಜಾಗತೀಕರಣ, ಖಾಸಗಿಕರಣದ ನಡುವೆ ನಮ್ಮ ಭಾಷೆ ಸೊರಗುತ್ತಿದೆ. ಇಂಗ್ಲೀಷ ಭಾಷೆಗೆ ಕೇವಲ 500 ವರ್ಷಗಳ ಇತಿಹಾಸವಿದ್ದು 2500 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಕನ್ನಡವನ್ನು, ಕನ್ನಡಿಗರನ್ನುಇಂದಿಗೂ ಆಳುತ್ತಿರುವುದು ವಿಷಾದನೀಯ. ಸರಕಾರ ಈ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಗಡಿಭಾಗದಲ್ಲಿ ಉಚಿತ ಕನ್ನಡ ವಸತಿ ಶಾಲೆಗಳಾಗಬೇಕು ಹಾಗೂ ಪ್ರಾಥಮಿಕ ಹಂತದಲ್ಲ್ಲಿ ಕಡ್ಡಾಯವಾಗಿ ಕನ್ನಡ ಕಲಿಬೇಕು ಎಂದರು.  

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸ್ಫರ್ಧಾತ್ಮಕ ಪರೀಕ್ಷೆಗಳ ಹಾಗೂ ನೌಕರಿ ಕುರಿತಂತೆ ವಿದ್ಯಾರ್ಥಿಗಳಿಗೆ  ಮಾಹಿತಿ ಕೊಡುವ ಕೇಂದ್ರಗಳಾಗಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಗಂಭೀರವಾಗಿ ಯೋಚಿಸಿ ರೂಪಿಸಿಕೊಳ್ಳಬೇಕು ಎಂದರು.  

ಮುಖ್ಯ ಅತಿಥಿಗಳಾದ ಬಿ.ಬಿ. ಮಠಪತಿ ಅವರು ಮಾತನಾಡಿ, ಕನ್ನಡ ಭಾಷೆ ನಮ್ಮ ಅಸ್ಮಿತೆ. ಎಲ್ಲ ಭಾಷೆಯನ್ನು ಪ್ರೀತಿಸೋಣ, ಕಲಿಯೋಣ. ಕನ್ನಡದ ಕೈಂಕರ್ಯ ಮರೆಯಬಾರದು ಎಂದರು. 

ವೇದಿಕೆ ಮೇಲೆ ಗುರುಲಿಂಗಪ್ಪ ಹಲಸಗಿ ಇದ್ದರು. ಎಂ.ಕೆ. ಹುಬ್ಬಳ್ಳಿ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಮುತ್ನಾಳ ಉದ್ಘಾಟಿಸಿದರು. ಸಂಯೋಜಕ ಚೇತನ ಕೊಟಗಿ ಹಾಗೂ ಪ್ರಾಂಶುಪಾಲರಾದ ಬಿ. ಎಂ. ಯರಗಟ್ಟಿ ಇದ್ದರು. 

ಆರಂಭದಲ್ಲಿ ಖೈರುನ್ನೀಸಾ ಖಾಜಿ ಸಂಗಡಿಗರು ಕನ್ನಡ ಗೀತೆಗಳನ್ನು, ತತ್ವಪದಗಳನ್ನು ಪ್ರಸ್ತುತಪಡಿಸಿದರು. ಯುವಜನ ಮಂಟಪದ ಸಂಚಾಲಕಿ ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಎಚ್‌. ಪೂಜಾರ ನಿರೂಪಿಸಿದರು. ನಿತಿನ್ ಮೆಣಸಿನಕಾಯಿ ವಂದಿಸಿದರು.  

ಕಾರ್ಯಕ್ರಮದಲ್ಲಿ ನಾಗಭೂಷಣ ಹಿರೇಮಠ, ಸುರೇಶ ನಿಡಗುಂದಿ, ಆರ್‌. ವಿ ನೀಲಪ್ಪನವರ, ವಿ.ಎಸ್‌. ಒಡ್ಡೀನ, ಸುನಂದಾ ಹೊಸಮನಿ, ಜಯಶ್ರೀ ದೇಸಾಯಿ, ಮೈನಾ ದೇಸಾಯಿ, ಎಲ್‌.ಕೆ. ಮಲಜಿ, ಬಸವರಾಜ ವಾಲಿ ಇದ್ದರು.