ತುಮಕೂರಿನಲ್ಲಿ ಮತ್ತೆ ನಾಲ್ಕು ಕೊರೋನಾ ಪ್ರಕರಣ ಪತ್ತೆ: ಜಿಲ್ಲಾಧಿಕಾರಿ ರಾಕೇಶ್‌ಕುಮಾರ್

ತುಮಕೂರು, ಮೇ 20,ತುಮಕೂರು ಜಿಲ್ಲೆಯಲ್ಲಿ 4 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು,  ಒಟ್ಟು 15 ಪ್ರಕರಣಗಳು ದಾಖಲಾಗಿವೆ. 8 ಪಾಸಿಟಿವ್ ಪ್ರಕರಣಗಳಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್ ತಿಳಿಸಿದ್ದಾರೆ.
ಮುಂಬೈನಿಂದ ಒಂದೇ ವಾಹನದಲ್ಲಿ 2 ಕುಟುಂಬಗಳ 6 ಮಂದಿ ಜಿಲ್ಲೆಗೆ ಬಂದಿದ್ದಾರೆ. ಅವರನ್ನು ಪ್ರತ್ಯೇಕವಾಗಿ ಕ್ವಾರೆಂಟೈನ್ ಮಾಡಲಾಗಿದೆ. ಇವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ೪ ಜನರಲ್ಲಿ ಕೋವಿಡ್-19 ಪಾಸಿಟಿವ್ ಮತ್ತು ಇಬ್ಬರ ಮಾದರಿ ನೆಗೆಟಿವ್ ಬಂದಿದೆ. ಪಾಸಿಟಿವ್ ಬಂದವರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳಿದ್ದಾರೆ. ಇವರಿಗೆ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗತ್ತಿದೆ. ಇವರು ಜಿಲ್ಲೆಗೆ ಬಂದ ತಕ್ಷಣ ಕ್ವಾರೆಂಟೈನ್ ಮಾಡಿದ್ದರಿಂದ ಯಾವುದೇ ಪ್ರಾಥಮಿಕ ಸಂಪರ್ಕ ಇಲ್ಲ. ಆದರೆ ಪ್ರಯಾಣದ ಸಮಯದಲ್ಲಿ ಯಾರ ಜೊತೆಯಲ್ಲಾದರೂ ಸಂಪರ್ಕದಲ್ಲಿದ್ದರೆ, ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅಂತರ್ ರಾಜ್ಯದಿಂದ ಜಿಲ್ಲೆಗೆ ಬರುವವರ ಮೇಲೆ ಹೆಚ್ಚಿನ ನಿಗಾವಹಿಸಿದ್ದು, ಸಾರ್ವಜನಿಕರು ಹೊರ ರಾಜ್ಯದಿಂದ ಬಂದವರ ಮಾಹಿತಿಯನ್ನು ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತಕ್ಕೆ ನೀಡಬೇಕೆಂದು ಅವರು ಮನವಿ ಮಾಡಿದರು.