ಗಬ್ಬು ನಾರುತ್ತಿರುವ ಅಥಣಿ ತರಕಾರಿ ಮಾರುಕಟ್ಟೆ: ಸ್ವಚ್ಛಗೊಳಿಸಲು ಸಾರ್ವಜನಿಕರ ಆಗ್ರಹ

ಗಬ್ಬು ನಾರುತ್ತಿರುವ ಅಥಣಿ ತರಕಾರಿ ಮಾರುಕಟ್ಟೆ: ಸ್ವಚ್ಛಗೊಳಿಸಲು ಸಾರ್ವಜನಿಕರ ಆಗ್ರಹ Foul-smelling Athani vegetable market: Public demands cleanup


ಅಥಣಿ 09: ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷದ ಪರಿಣಾಮ ಕೊಳಚೆಯಲ್ಲಿಯೇ ಕಾಯಿ ಪಲ್ಲೆ ಮಾರಾಟಗಾರರು ಮೂಗು ಮುಚ್ಚಿಕೊಂಡು  ಕೂತು ಮಾರಾಟ ಮಾಡುವ ಸ್ಥಿತಿ ಒಂದೆಡೆಯಾದರೆ ಮತ್ತೊಂದೆಡೆ ಈ ಹೊಲಸಿನಲ್ಲಿಯೇ ತರಕಾರಿ ಖರೀದಿಸುವ ಸ್ಥಿತಿ ಬಂದೊಗಿದ್ದಕ್ಕೆ ಪುರಸಭೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ನಗರವನ್ನು ಸ್ವಚ್ಛತೆ ಮಾಡುವುದೇ ಪುರಸಭೆಯ ಮುಖ್ಯ ಕೆಲಸವಾಗಿದೆ ಇದಕ್ಕಾಗಿ ಸಾಕಷ್ಟು ಅನುದಾನ ಕೂಡ ಬರುತ್ತದೆ ಆದರೆ ಮುಖ್ಯಾಧಿಕಾರಿಗಳ ಬೇಜವಾಬ್ದಾರಿ ಮತ್ತು ದಿವ್ಯ ನಿರ್ಲಕ್ಷದ ಪರಿಣಾಮ ಅಥಣಿ ಸ್ವಚ್ಛತೆಯ ಕಲ್ಪನೆಯಿಂದ ದೂರ ಸರಿಯುತ್ತಿದೆ. 

ಇದು ಟ್ರೇಲರ್‌ನಂತಿದೆ ಇಡೀ ಮಾರುಕಟ್ಟೆ ಪ್ರದೇಶ  ಈ ದುಸ್ಥಿಗಿಂತ ಹೊರತಾಗಿಲ್ಲ ಇದರಿಂದ ಅಥಣಿ ನಗರದ ತುಂಬೆಲ್ಲ ಗಬ್ಬು ವಾಸನೆ, ವಿಪರಿತ ಸೊಳ್ಳೆಗಳ ಕಾಟ  ಹೆಚ್ಚಾಗಿದೆ ಇದರಿಂದ ಡೆಂಗ್ಯೂ, ಮಲೇರಿಯಾ, ಚಳಿ ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ  ಸಾರ್ವಜನಿಕರು ಪುರಸಭೆಯ ಅಧಿಕಾರಿಗಳ ನಿರ್ಲಕ್ಷದ ಧೋರಣೆಗೆ ಆಕ್ರೋಷ ವ್ಯಕ್ತ ಪಡಿಸುತ್ತಿದ್ದಾರೆ. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ತರಕಾರಿ ಮಾರುಕಟ್ಟೆ ಪ್ರದೇಶವನ್ನು ಸ್ವಚ್ಛಗೊಳಿಸಬೇಕು ಎಂದು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಜೊತೆಗೆ ಸಾರ್ವಜನಿಕರು ಕೂಡ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. 

ಪುರಸಭಾ ಅಧ್ಯಕ್ಷರು ಕೂಡ ಸ್ವಚ್ಛತೆಗೆ ಹೆಚ್ಚು ಗಮನ ಕೊಡಬೇಕು ಎಂದು ಮುಖ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕೂಡ  ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಹೀಗಾಗಿ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಅನಿವಾರ್ಯ ವಾಗಿ ಹೋರಾಟದ ಹಾದಿ ಹಿಡಿಯಲು ಮುಂದಾಗಿದ್ದಾರೆ. ಪುರಸಭಾ ಅಧಿಕಾರಿಗಳ ಇಂತಹ ವರ್ತನೆಗೆ ಮೇಲಾಧಿಕಾರಿಗಳ ಅಥಣಿಗೆ ಭೇಟಿ ನೀಡಿ ಪರೀಶೀಲಿಸಿ ಕ್ರಮಕ್ಕೆ ಮುಂದಾಗಬೇಕು ಇಲ್ಲದೇ ಹೋದಲ್ಲಿ ಪ್ರತಿಭಟನೆಯ ಬಿಸಿ ಅನುಭವಿಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.  

ಸಚಿವ ಲಕ್ಷ್ಮಣ ಸವದಿ ಅಥಣಿ ನಗರದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ಜೋಡು ಕೆರೆ, ಭಾಗೀರಥಿ ನಾಲಾ ಅಭಿವೃದ್ಧಿಗಾಗಿ ಅಂದಾಜು 30 ಕೋಟಿ ಅನುದಾನ ಮಂಜೂರುಗೊಳಿಸಿ ಅರ್ಧದಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ ಆದರೆ ಪುರಸಭೆಯ ಅಧಿಕಾರಿಗಳ ಈ ನಡೆಯಿಂದ ಸಚಿವರ ಅನುದಾನದ ಸದುಪಯೋಗ ಆಗದೇ ಹೊಳೆಯಲ್ಲಿ ಹುಣಸಿ ಹಣ್ಣು ತೊಳೆದಂತಾಗಿದೆ ಎನ್ನುತ್ತಿದ್ದಾರೆ ಅಥಣಿಯ ಸಾರ್ವಜನಿಕರು. ಸಚಿವ ಲಕ್ಷ್ಮಣ ಸವದಿಯವರು ಕೂಡ ತಕ್ಷಣ ಗಮನ ಹರಿಸಿ ಕೆಲಸ ಮಾಡದ, ಖುರ್ಚಿಗೆ ಅಂಟಿಕೊಂಡು ಕೂತ, ಜಿಡ್ಡು ಹಿಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗಬೇಕಿದೆ.