ಮಂಗಳೂರು, ಜ.27, ಹಿರಿಯ ರಾಜಕಾರಣಿ, ಜೆಡಿಎಸ್ ಮುಖಂಡ, ಮಾಜಿ ಸಚಿವ ಅಮರನಾಥ ಶೆಟ್ಟಿ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತುಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಎರಡು ವಾರಗಳ ಹಿಂದೆ ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಕರಾವಳಿಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಅಮರನಾಥ ಶೆಟ್ಟಿ 10 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಈ ಪೈಕಿ 3 ಬಾರಿ ಗೆಲುವು ಸಾಧಿಸಿದ್ದರು. ಗೆಲುವು ಕಂಡ ಮೂರು ಬಾರಿಯೂ ಅವರು ಸಚಿವರಾಗಿದ್ದರು. ಜನತಾ ಪಕ್ಷದಿಂದ 1983 ಮತ್ತು 1985ರಲ್ಲಿ ಶಾಸಕರಾಗಿದ್ದ ಶೆಟ್ಟಿ, 1994ರಲ್ಲಿ ಜನತಾ ದಳದಿಂದ ಶಾಸಕರಾಗಿದ್ದರು. 1965ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಅವರು, ಕಾರ್ಕಳ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ಮುಂದೆ ಮೂಡಬಿದಿರೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾರ್ಕಳ ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷ, ಸಹಕಾರಿ ಸೇವಾ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ 1983ರಲ್ಲಿ ಮೊದಲ ಬಾರಿಗೆ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1987 ಮತ್ತು 1994ರಲ್ಲಿಯೂ ಅವರು ಮರು ಆಯ್ಕೆಯಾಗಿದ್ದರು. ಪ್ರವಾಸೋದ್ಯಮ ಮತ್ತು ಮುಜರಾಯಿ ಸಚಿವರಾಗಿದ್ದರು. ರಾಜಕೀಯುದ್ದಕ್ಕೂ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಂಡಿದ್ದ ಶೆಟ್ಟಿ ಅವರು ಸಚ್ಚಾರಿತ್ರ್ಯವಂತ ರಾಜಕಾರಣಿ ಎಂಬ ಹೆಸರನ್ನು ಗಳಿಸಿದ್ದರು. ಅತ್ಯಂತ ಸರಳ ಜೀವನ ನಡೆಸುತ್ತಿದ್ದ ಅವರು ಸಾಮಾನ್ಯ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರ ಸಹಪಾಠಿಯಾಗಿದ್ದ ಶೆಟ್ಟಿ ಅವರಿಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದರು. 1994ರಲ್ಲಿ ಕಂಡ ಗೆಲುವೇ ಅವರ ಕೊನೆಯ ಗೆಲುವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡೆಸಿದ ಅಪಪ್ರಚಾರದಿಂದ ಅವರು ಸೋಲು ಕಂಡರು ಎಂದು ಅವರ ಆತ್ಮೀಯರು ಹೇಳುತ್ತಾರೆ.ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.ಅಮರನಾಥ ಶೆಟ್ಟಿ ಅವರ ನಿಧನಕ್ಕೆ ವಿವಿಧ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.