ಮಾಸ್ಕೋ, ಸೆ 6: ಜಿಂಬಾಬ್ವೆಯ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು ಎಂದು ಅಧ್ಯಕ್ಷ ಎಮ್ಮರ್ಸನ್ ನಂಗ್ವಾಗ್ವ ಶುಕ್ರವಾರ ತಿಳಿಸಿದ್ದಾರೆ. ಜಿಂಬಾಬ್ವೆಯ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರ ನಿಧನವನ್ನು ಅತ್ಯಂತ ದುಃಖದಿಂದ ಘೋಷಿಸುತ್ತಿದ್ದೇನೆ. ಮುಗಾಬೆ ವಿಮೋಚನೆಯ ಹರಿಕಾರರಾಗಿದ್ದು, ಪ್ಯಾನ್-ಆಫ್ರಿಕನ್ ವಾದಿಯಾಗಿದ್ದರು. ತಮ್ಮ ಜನರ ವಿಮೋಚನೆ ಮತ್ತು ಸಬಲೀಕರಣಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟರು. ನಮ್ಮ ರಾಷ್ಟ್ರ ಮತ್ತು ಖಂಡದ ಇತಿಹಾಸಕ್ಕೆ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಆತ್ಮವು ಶಾಶ್ವತ ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಎಮ್ಮರ್ಸನ್ ಟ್ವೀಟ್ ಮಾಡಿದ್ದಾರೆ. ಮುಗಾಬೆ 1987 ರಿಂದ 2017 ರವರೆಗೆ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು.