ಬೆಂಗಳೂರು, ಅ 16: ವಾಯು ವಿಹಾರಕ್ಕೆ ತೆರಳಿದ್ದ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ( 52) ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಆರ್ಟಿ. ನಗರದಲ್ಲಿ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ಅಲಯನ್ಸ್ ವಿಶ್ವವಿದ್ಯಾಲಯಲ್ಲಿ ನಡೆದ ಗಲಾಟೆ ಈ ಕೃತ್ಯಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗುತ್ತಿದೆ. ಇವರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲೂ ಅಯ್ಯಪ್ಪ ದೊರೆ ಸಕ್ರಿಯರಾಗಿದ್ದರು.
ಅಯ್ಯಪ್ಪ ದೊರೆ ಪ್ರತಿನಿತ್ಯ ರಾತ್ರಿ ಊಟ ಮಾಡಿದ ಬಳಿಕ ಮನೆಯ ಸುತ್ತಮುತ್ತ ವಾಯುವಿಹಾರಕ್ಕೆ ತೆರಳುವ ಪರಿಪಾಠ ಇಟ್ಟುಕೊಂಡಿದ್ದರು. ಮಂಗಳವಾರ ಕೂಡ ಅವರ ಆರ್ಟಿ.ನಗರದಲ್ಲಿರುವ ತಮ್ಮ ಮನೆಯ ಸಮೀಪದ ರಸ್ತೆಯಲ್ಲಿ ಸಾಗುತ್ತಿದ್ದಾಗ ಎದುರಿಗೆ ಬಂದ ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಮರುದಿನ ಬೆಳಗ್ಗೆ ಅವರ ಪತ್ನಿ ಭಾವನ ಆರ್ಟಿ. ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಲೆ ನಡೆದ ಸ್ಥಳಕ್ಕೆ ಫಾರೆನ್ಸಿಕ್ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಕೂಡಾ ಭೇಟಿ ನೀಡಿದರು. ನಂತರ ಮಾತನಾಡಿದ ಅವರು, ಅಯ್ಯಪ್ಪ ದೊರೆ ಅಲಯನ್ಸ್ ಯುನಿವರ್ಸಿಟಿಯ ಮಾಜಿ ಉಪಕುಲಪತಿಯಾಗಿದ್ದರು. ಮಂಗಳವಾರ ರಾತ್ರಿ ಅವರ ಮನೆಯಿಂದ ಕೂಗಳತೆ ದೂರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅಲಯನ್ಸ್ ಯುನಿವರ್ಸಿಟಿಯಲ್ಲಿ ಕೆಲವು ವ್ಯಾಜ್ಯಗಳಿದ್ದವು. ಇದೇ ಕಾರಣಕ್ಕೆ ಕೊಲೆ ನಡೆದಿರಬಹುದು ಎಂಬ ಅನುಮಾನವಿದೆ. ಎರಡು ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ವಿಜಯಪುರ ಮೂಲದ ಅಯ್ಯಪ್ಪ ದೊರೆ ಕಳೆದ 17 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಿದ್ದರು. 7-8 ವರ್ಷಗಳ ಕಶಲ ಅಲಯನ್ಸ್ ಯೂನಿವರ್ಸಿಟಿ ಉಪ ಕುಲಪತಿ ಆಗಿದ್ದರು. ಕೋರ್ಟ್ ನಲ್ಲಿ ಅಲಯನ್ಸ್ ಯೂನಿವರ್ಸಿಟಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ವಿಚಾರಣಾ ಹಂತದಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.