ಮಾಜಿ ಸಭಾಪತಿ ಡಿ.ಮಂಜುನಾಥ್ ನಿಧನ

ಬೆಂಗಳೂರು, ಫೇ 3 :      ನಾಡಿನ ಹಿರಿಯ ರಾಜಕಾರಣಿ, ಮಾಜಿ ಸಚಿವ, ವಿಧಾನಪರಿಷತ್ತಿನ ಮಾಜಿ ಸಭಾಪತಿ ಡಿ.ಮಂಜುನಾಥ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು. ಅವರಿಗೆ ೯೨ ವರ್ಷ ವಯಸ್ಸಾಗಿತ್ತು. 

ಕಳೆದ ೧೯೬೭ರಲ್ಲಿ ವಿಧಾನಸಭೆಗೆ ಹಿರಿಯೂರಿನಿಂದ ಚುನಾಯಿತರಾಗಿ ರಾಜ್ಯ ರಾಜಕಾರಣ ಪ್ರವೇಶಿಸಿದ್ದ ಮಂಜುನಾಥ್, ನಂತರ ೧೯೮೩ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಯೋಜನೆ, ಕಾರ್ಮಿಕ ಸಚಿವರಾಗಿ , ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ, ಬಳಿಕ ಎಚ್.ಡಿ. ದೇವೇಗೌಡ ಮತ್ತು ಜೆ.ಎಚ್ ಪಟೇಲ್ ಸರ್ಕಾರದಲ್ಲೂ ಸಹ ಸಚಿವಾಗಿ ಕಾರ್ಯನಿರ್ವಹಿಸಿದ್ದರು. 

ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿ ಸಭಾಪತಿ ಆಗಿಯೂ ಕಾರ್ನಿರ್ವಹಿಸಿದ್ದರು. ರಾಜ್ಯ ಜನತಾದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ರಾಜಕಾರಣಿ ಡಿ. ಮಂಜುನಾಥ್, ಕಳೆದ ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಸರಿದು ವಿಶ್ರಾಂತ ಜೀವನ ನಡೆಸುತ್ತಿದ್ದರು. 

ಡಿ. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ಅವರ ನಿಧನದಿಂದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ ಎಂದಿದ್ದಾರೆ. 

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಮ್ಮ ಸಂತಾಪದಲ್ಲಿ, ಮಂಜುನಾಥ್ ಅವರ ನಿಧನದಿಂದ ದಲಿತ ಮುಂದಾಳು ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಅವರನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದ್ದಾರೆ. 

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಸೇರಿ ಹಲವು ಗಣ್ಯರು ಡಿ. ಮಂಜುನಾಥ್ ನಿಧಕ್ಕೆ ಸಂತಾಪ ಸೂಚಿಸಿದ್ದಾರೆ.