ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ನಿಧನ : ವಿಧಾನ ಸಭೆಯಲ್ಲಿ ಸಂತಾಪ ಸೂಚನೆ

Former Chief Minister S.M.Krishna passes away: condolence notice in Legislative Assembly

ಬೆಳಗಾವಿ ಸುವರ್ಣ ವಿಧಾನಸೌಧ.ಡಿ.10: ಡಿ.10 ರಂದು ಮುಂಜಾನೆ ನಿಧನರಾದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ವಿಧಾನ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.  

ಬೆಳಗಾವಿ ಸುವರ್ಣ ಸೌಧದಲ್ಲಿ ಜರುಗುತ್ತಿರುವ ಚಳಿಗಾಲದ ಅಧಿವೇಶನದ ಎರಡನೆ ದಿನವಾದ ಮಂಗಳವಾರ ಸಭಾಧ್ಯಕ್ಷರಾದ ಯು.ಟಿ.ಖಾದರ್ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ ಚರ್ಚೆಗೆ ಅವಕಾಶ ನೀಡಿದರು.  

ಈ ವೇಳೆ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಎಸ್‌.ಎಂ. ಕೃಷ್ಣ ಅವರು 01.05.1932 ರಂದು ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದ್ದರು. ಬಿ.ಎ. ಬಿ.ಎಲ್‌. ಪದವಿ ಪಡೆದಿದ್ದ ಅವರು ನಂತರ ಟೆಕ್ಸಾಸ್‌ನಲ್ಲಿ ಎಂ.ಸಿ.ಎಲ್‌. ಪದವಿ, ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್‌ನಿಂದಲೂ ಪದವಿ ಪಡೆದಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಎಸ್‌.ಎಂ.ಕೃಷ್ಣ ಅವರು ಕಾನೂನು ಕಾಲೇಜಿನಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 1962ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು ನಂತರ 1989ರಲ್ಲಿ 9ನೇ ವಿಧಾನಸಭೆಗೆ 1999 ರಲ್ಲಿ 11ನೇ ವಿಧಾನಸಭೆಗೆ ಹಾಗೂ 2004ರಲ್ಲಿ 12ನೇ ವಿಧಾನಸಭೆಗೆ ಪುನರಾಯ್ಕೆಗೊಂಡಿದ್ದರು. 1968ರಲ್ಲಿ 4ನೇ ಲೋಕಸಭೆಗೆ ಚುನಾಯಿತರಾಗಿದ್ದ ಅವರು 1971ರಲ್ಲಿ 5ನೇ ಲೋಕಸಭೆಗೆ, 1980 ರಲ್ಲಿ ಏಳನೇ ಲೋಕಸಭೆಗೆ ಪುನರಾಯ್ಕೆಗೊಂಡಿದ್ದರು. ನಂತರ ಅವರು 1972ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಗೊಂಡಿದ್ದು, 1996 ರಿಂದ 1999 ಮತ್ತು 2008 ರಿಂದ 2014ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಸದನಕ್ಕೆ ತಿಳಿಸಿದರು.  

ಉಪ ಮುಖ್ಯಮಂತ್ರಿಯಾಗಿ ಹಾಗೂ ನಂತರ ರಾಜ್ಯದ 10ನೇ ಮುಖ್ಯಮಂತ್ರಿಯಾಗಿ ಎಸ್‌.ಎಂ.ಕೃಷ್ಣ ಸೇವೆ ಸಲ್ಲಿಸಿದ್ದರು. ಕೇಂದ್ರ ಕೈಗಾರಿಕೆ ರಾಜ್ಯ ಸಚಿವರಾಗಿ, ಹಣಕಾಸು ಖಾತೆಯ ರಾಜ್ಯ ಸಚಿವರಾಗಿ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿಯೂ ಸಹ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಮಹಾರಾಷ್ಟ್ರ ರಾಜ್ಯದ 18ನೇ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. 

ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡಿದ್ದ ಅವರು ಭೂ ದಾಖಲೆಗಳನ್ನು ಡಿಜೀಲೀಕರಣಗೊಳಿಸುವ ಭೂಮಿ ಯೋಜನೆ, ಸರ್ಕಾರಿ ಮಕ್ಕಳಿಗೆ ಬಿಸಿಯೂಟ ಯೋಜನೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು- ಮೈಸೂರು ಹೆದ್ದಾರಿ ಯೋಜನೆ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದ ಅವರು ರಾಜ್ಯದಲ್ಲಿ ಐಟಿ-ಬಿಟಿ ಕ್ರಾಂತಿಯನ್ನೇ ಮಾಡಿದ್ದರು. ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿಸಿ, ಸಿಂಗಾಪೂರ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಎಸ್‌.ಎಂ.ಕೃಷ್ಣ ರವರು ಅತ್ಯುತ್ತಮ ಆಡಳಿತಗಾರರಾಗಿದ್ದರು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ರಾಜ್ಯದಲ್ಲಿ ಅಧಿಕಾರ ನಡೆಸಿದರು. ಡಾ.ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರ​‍್ಪನ್ ಅಪಹರಿಸಿದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅಪ್ರತಿಮವಾದದ್ದು. ತೀವ್ರತರವಾದ ಬರಗಾಲದ ಸಂದರ್ಭದಲ್ಲಿ ರಾಜ್ಯದ ಜನರ ಹಿತಾಸಕ್ತಿಗಾಗಿ ಮೋಡಬಿತ್ತನೆ ಮಾಡಿ ಮಳೆ ಭರಿಸಲು ಮುಂದಾಗಿದ್ದರು. ಸದಾಕಾಲ ಅಭಿವೃದ್ಧಿಯ ಚಿಂತಕರಾಗಿದ್ದ ಶ್ರೀಯುತರು ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಬಹುಮುಖ ಪ್ರತಿಭೆಯಾಗಿದ್ದ ಅವರಿಗೆ 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗಿತ್ತು ಎಂದು ಸ್ಮರಿಸಿ, ಎಸ್‌.ಎಂ. ಕೃಷ್ಣ ಅವರು ನಿಧನರಾದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.  

ಎಸ್‌.ಎಂ.ಕೃಷ್ಣ ಅವರು ಎಂದಿಗೂ ದ್ವೇಷದ ರಾಜಕಾರಣ ಮಾಡಲಿಲ್ಲ. ಅವರು ಅಲಂಕರಿಸಿದ ಎಲ್ಲ ಉನ್ನತ ಸ್ಥಾನಗಳಿಗೂ ಗೌರವ ತಂದರು. ಗ್ರಾಮೀಣ ಭಾಗದ ಯುವಜನರಿಗೆ ಕಿಯೋನಿಕ್ಸ್‌ ಮೂಲಕ ಕಂಪ್ಯೂಟರ್ ಶಿಕ್ಷಣ ನೀಡಿದರು. ನಾವು ಹುಟ್ಟಿದಾಗ ಹೆಸರು ಇರುವುದಿಲ್ಲ. ಆದರೆ ಉಸಿರು ಇರುತ್ತದೆ. ಸತ್ತ ನಂತರ ಉಸಿರು ಇರುವುದಿಲ್ಲ, ಹೆಸರು ಮಾತ್ರ ಇರುತ್ತದೆ. ಈ ಹೆಸರು ಶಾಶ್ವತವಾಗಿ ಉಳಿಯುವಂತೆ ಬದುಕು ನಡೆಸಬೇಕು. ಈ ರೀತಿಯಾಗಿ ಬದುಕಿ ತಮ್ಮ ಹೆಸರನ್ನು ಶಾಶ್ವತವಾಗಿಸಿದವರು ಎಸ್‌.ಎಂ.ಕೃಷ್ಣ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.  

ಎಸ್‌.ಎಂ.ಕೃಷ್ಣ ಅವರ ಅಭಿಮಾನಿ ನಾನು-ಮುಖ್ಯಮಂತ್ರಿ ಸಿದ್ದರಾಮಯ್ಯ :  

ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಎಸ್‌.ಎಂ.ಕೃಷ್ಣ ಅವರ ಅಭಿಮಾನಿಯಾಗಿದ್ದೆ ಎಂದರು.  

1968ರಲ್ಲಿ ಲೋಕಸಭಾ ಸ್ಥಾನಕ್ಕೆ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯಿಂದ ಎಸ್‌.ಎಂ.ಕೃಷ್ಣ ಅವರು ಸ್ಪರ್ಧಿಸಿದ್ದರು. ಇವರನ್ನು ಬೆಂಬಲಿಸಿ ಮಂಡ್ಯ ವಿದ್ಯಾರ್ಥಿ ಬಳಗದಿಂದ ಮೈಸೂರಿನ ಟೌನ್ ಹಾಲ್ ನಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅವರನ್ನು ಬೆಂಬಲಿಸಿದ್ದೆ. ನಂತರ ಲೋಹಿಯಾ ಅವರ ಸಮಾಜವಾದಿ ಪಕ್ಷ ಸೇರೆ​‍್ಡಯಾದೆ. ಎಸ್‌.ಎಂ.ಕೃಷ್ಣ ಅವರು, 1962 ರಲ್ಲೇ ಸ್ವತಂತ್ರವಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರೂ ಆಗಿದ್ದು, ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿಯಾಗಿದ್ದರು. 2005 ರಲ್ಲಿ ಎಸ್‌.ಎಂ.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗ ಮುಂಬೈನಲ್ಲಿ ಭೇಟಿಯಾಗಿ ಕಾಂಗ್ರೆಸ್ ಸೇರುವ ತೀರ್ಮಾನವನ್ನು ಅವರಿಗೆ ತಿಳಿಸಿದೆ. ಅವರು ನನ್ನ ತೀರ್ಮಾನವನ್ನು ಸ್ವಾಗತಿಸಿದ್ದರು. ಒಳ್ಳೆ ಸಂಸದೀಯ ಪಟು, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಸಿಂಗಾಪುರದಂತೆ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಕನಸು ಹೊಂದಿದ್ದರು. ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎನ್ನುವ ಹೆಗ್ಗಳಿಕೆ ಬರಲು ಎಸ್‌.ಎಂ.ಕೃಷ್ಣ ಅವರ ಕೊಡುಗೆ ಅಪಾರ. ಕಾಂಗ್ರೆಸ್ ಮೂಲಕ ಸುದೀರ್ಘ ರಾಜಕಾರಣ ಮಾಡಿ, ಬಿಜೆಪಿ ಸೇರಿ ಒಂದು ವರ್ಷಕ್ಕೆ ರಾಜಕೀಯ ನಿವೃತ್ತಿ ಘೋಷಿಸಿದ ದಕ್ಷ ಆಡಳಿತಗಾರ, ಸಜ್ಜನ-ಮುತ್ಸದ್ದಿ ರಾಜಕಾರಣಿ ಆಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಮರಿಸಿದರು.  

ಬ್ರ್ಯಾಂಡ್ ಬೆಂಗಳೂರಿನ ರುವಾರಿ- ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ :  

ಇಂದು ನಾವೆಲ್ಲರೂ ಹೆಮ್ಮೆಯಿಂದ ಹೇಳುವ ಬ್ರ್ಯಾಂಡ್ ಬೆಂಗಳೂರು ಎಂಬ ಪರಿಕಲ್ಪನೆಯ ರುವಾರಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಹೇಳಿದರು.  

ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಆರ್‌.ಅಶೋಕ್, ಬೆಂಗಳೂರಿನ ಜನ ಎಂದಿಗೂ ಎಸ್‌.ಎಂ.ಕೃಷ್ಣ ಅವರ ಅಭಿವೃದ್ಧಿ ಕಾರ್ಯವನ್ನು ಮರೆಯುವುದಿಲ್ಲ. ಇಂದು ಯಾವುದೇ ಅಂತರಾಷ್ಟ್ರೀಯ ನಾಯಕರು ಸಹ ರಾಷ್ಟ್ರಕ್ಕೆ ಬಂದರೆ ತಪ್ಪದೇ ಬೆಂಗಳೂರಿಗೆ ಭೇಟಿ ನೀಡುತ್ತಾರೆ. ಇಂತಹ ಘನತೆ ಬೆಂಗಳೂರು ನಗರಕ್ಕೆ ಬರಲು ಎಸ್‌.ಎಂ.ಕೃಷ್ಣ ಕಾರಣವಾಗಿದ್ದಾರೆ. 

ರಾಜ್ಯದ ಅರ್ಥಿಕತೆಗೆ ಶೇ.60 ರಷ್ಟು ಕೊಡುಗೆ ಬೆಂಗಳೂರು ನಗರ ನೀಡುತ್ತದೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ನಗರ ಅಭಿವೃದ್ಧಿಗಾಗಿ ಪ್ರತ್ಯೇಕ ಟಾಸ್ಕ್‌ ಪೋರ್ಸ್‌ ರಚಿಸಿ, ಕಳಪೆ ಕಾಮಗಾರಿ ಆಗದ ರೀತಿ ನೋಡಿಕೊಂಡರು. ಪತ್ರಿಷ್ಠಿತ ಇಂಡಿಯಾ ಟುಡೆ ಪತ್ರಿಕೆ ಎಸ್‌.ಎಂ.ಕೃಷ್ಣ ಅವರನ್ನು ದೇಶದ ನಂ.1 ಮುಖ್ಯಮಂತ್ರಿ ಎಂದು ಬಣ್ಣಿಸಿತ್ತು. ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ಕಳಂಕ, ಭ್ರಷ್ಟಾಚರದ ಆರೋಪಗಳಿಗೆ ಗುರಿಯಾಗದೆ ಆಡಳಿತ ನಡೆಸಿದರು. ಪಾಂಚಜನ್ಯ ಮೂಲಕ ರಾಜ್ಯದ ಜನರ ಆರ್ಶಿವಾದ ಪಡೆದು ಮುಖ್ಯಮಂತ್ರಿಗಳಾದ ಅವರು, ತಮ್ಮ ಆಡಳಿತ ಅವಧಿಯಲ್ಲಿ ತೀವ್ರ ಬರ ಪರಿಸ್ಥಿತಿ, ಕಂಬಾಲಪಲ್ಲಿ ದಲಿತರ ಹತ್ಯೆ, ಡಾ.ರಾಜಕುಮಾರ್ ಅಪರಹಣ, ಮಾಜಿ ಸಚಿವ ನಾಗಪ್ಪ ಅಪಹರಣ, ಕಾವೇರಿ ನೀರು ಹಂಚಿಕೆ ಹೋರಾಟ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರು. ಇವುಗಳನ್ನು ಶಾಂತ ರೀತಿಯಿಂದ ಪರಿಹರಿಸಿದರು.  

ಎಸ್‌.ಎಂ.ಕೃಷ್ಣ ಅವರ ತಂದೆ ಮಲ್ಲಯ್ಯನವರು ವಿದ್ಯಾರ್ಥಿಗಳಿಗಾಗಿ ಮಂಡ್ಯನಗರದಲ್ಲಿ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಿಸಿದ್ದರು. 1934ರಲ್ಲಿ ಮಹಾತ್ಮ ಗಾಂಧೀಜಿ ಹರಿಜನರ ಉದ್ದಾರಕ್ಕಾಗಿ ನಿಧಿ ಸಂಗ್ರಹ ಉದ್ದೇಶದಿಂದ ಮಲ್ಲಯ್ಯನವರ ಮನೆಗೂ ಭೇಟಿ ನೀಡಿದ್ದರು. ಈ ವೇಳೆ ಎಸ್‌.ಎಂ.ಕೃಷ್ಣ ಅವರು ತಮ್ಮ ಬಂಗಾರದ ಕಿವಿಯೋಲೆ ಅರ​‍್ಿಸಿ ಗಾಂಧೀಜಿ ಅವರ ಆರ್ಶಿವಾದ ಪಡೆದಿದ್ದನ್ನು ಈ ಸಂದರ್ಭದಲ್ಲಿ ಆರ್‌.ಅಶೋಕ್ ಸ್ಮರಿಸಿದರು.  

ಎಸ್‌.ಎಂ.ಕೃಷ್ಣ ಕ್ರೀಡಾಸ್ಪೂರ್ತಿ ನಮಗೆಲ್ಲ ಮಾದರಿ- ಗೃಹ ಸಚಿವ ಡಾ.ಜಿ.ಪರಮೇಶ್ವರ್ : 

ತಮ್ಮ ವ್ಯಕ್ತಿತ್ವ ಮೂಲಕವೇ ಎಸ್‌.ಎಂ.ಕೃಷ್ಣ ಅವರು ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಟೆನಿಸ್ ಕ್ರೀಡಾಪಟು ಆಗಿದ್ದ ಅವರು, ರಾಜಕಾರಣದಲ್ಲೂ ಸಹ ಕ್ರೀಡಾಸ್ಪೂರ್ತಿ ಹೊಂದಿದ್ದರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.  

ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಿಂದಲೂ ಪ್ರತಿಭಾನ್ವಿತರಾಗಿದ್ದ ಎಸ್‌.ಎಂ.ಕೃಷ್ಣ ಪ್ರಖ್ಯಾತ ವಾಷಿಂಗ್ಟನ್ ವಿಶ್ವ ವಿದ್ಯಾಲಯದಲ್ಲಿ ಫುಲ್ ಬ್ರೈಟ್ ಸ್ಕಾಲರ್ ಪಡೆದ ಏಕೈಕ ರಾಜಕಾರಣಿಯಾಗಿದ್ದಾರೆ. ಬೆಂಗಳೂರನ್ನು ಐ.ಟಿ. ಕ್ರಾಂತಿ ಮೂಲಕ ಇಡಿ ಜಗತ್ತಿಗೆ ಪರಿಚಯಿಸಿಕೊಟ್ಟರು. ಅವರು ಮುಖ್ಯಮಂತ್ರಿಗಳು ಆಗಿದ್ದ ವೇಳೆ ದಿನ ಒಂದಕ್ಕೆ 200 ರಿಂದ 300 ಸಣ್ಣ ಹಾಗೂ ದೊಡ್ಡ ಐ.ಟಿ. ಕಂಪನಿಗಳು ನೊಂದಣಿಯಾಗಿದ್ದ ಉದಾಹರಣೆ ಇದೆ. ಈ ಕಂಪನಿಗಳೇ ಇಂದು ದೈತ್ಯ ಐ.ಟಿ. ಕಂಪನಿಗಳಾಗಿ ಬೆಳದಿವೆ. ಉತ್ತರ ಕರ್ನಾಟಕದ 7 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಶಾಲೆಗಳಲ್ಲಿ ಜಾರಿಗೆ ತಂದ ಮಧ್ಯಾಹ್ನ ಬಿಸಿಯೂಟ ಯೋಜನೆ ಮುಂದೆ ರಾಷ್ಟ್ರೀಯ ನೀತಿಯಾಗಿ ಇಡೀ ದೇಶದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.  

ಮುಖ್ಯಮಂತ್ರಿಯಾಗಿ ತಮ್ಮ ಸಂಪುಟದ ಸಹದ್ಯೋಗಿಗಳನ್ನು ಗೌರವದಿಂದ ಕಾಣುತ್ತಿದ್ದರು. ಸಚಿವ ಸಂಪುಟ ಒಪ್ಪಿಗೆ ಪಡೆದು ರಾಷ್ಟ್ರಾದ್ಯಂತ ಗಮನಸೆಳದ ತೆಲಗಿ ಛಾಪಾ ಕಾಗದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದನ್ನು ಸ್ಮರಿಸಿದರು.  

ಉತ್ತರ ಕರ್ನಾಟಕ ಅಭಿವೃದ್ದಿಗೆ ಎಸ್‌.ಎಂ.ಕೃಷ್ಣ ಕೊಡುಗೆ ಅಪಾರ- ಸಚಿವ ಹೆಚ್‌.ಕೆ.ಪಾಟೀಲ್‌:   

ಬಚಾವತ್ ನ್ಯಾಯಾಧೀಕರಣ ಶಿಫಾರಸ್ಸು ಮೇರೆಗೆ ಕೃಷ್ಣಾ ನದಿ ನೀರಿನಲ್ಲಿ ರಾಜ್ಯಕ್ಕೆ 734 ಟಿ.ಎಂ.ಸಿ ನೀರು ಲಭಿಸಿತು. ಅದುವರೆಗೂ ಕೇವಲ 400 ಟಿ.ಎಂ.ಸಿ ನೀರಿಗೆ ಮಾತ್ರ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತು. ಮುಖ್ಯಮಂತ್ರಿಗಳಾಗಿದ್ದ ಎಸ್‌.ಎಂ.ಕೃಷ್ಣ ಅವರು ಕೂಡಲೇ 729 ಟಿ.ಎಂ.ಸಿ. ನೀರು ಬಳಕೆಗೆ ಎ ಸ್ಕೀಂ ಯೋಜನೆ ರೂಪಿಸಿ ಅನುದಾನ ನೀಡಿದರು. ಸರ್ಕಾರದ ಒಟ್ಟು ಆಯವ್ಯಯದಲ್ಲಿ ಶೇ.37 ರಷ್ಟು ನೀರಾವರಿ ಯೋಜನಗಳಿಗೆ ಮೀಸಲು ಇರಿಸಿದರು. ಇದರಲ್ಲಿ ಶೇ.75 ರಷ್ಟು ಅನುದಾನ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಒದಗಿಸುವ ಮೂಲಕ ಉತ್ತರ ಕರ್ನಾಟಕ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹೆಚ್‌.ಕೆ.ಪಾಟೀಲ್ ಹೇಳಿದರು.  

ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಸಚಿವ ಹೆಚ್‌.ಕೆ.ಪಾಟೀಲ್ ರಾಜ್ಯದ ಪ್ರಾದೇಶಿಕ ಅಸಮತೋಲನತೆಯನ್ನು ನಿವಾರಿಸಲು ಎಸ್‌.ಎಂ.ಕೃಷ್ಣ ಅವರು ಡಾ.ಡಿ.ಎಂ.ನಂಜುಡಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದರು. ಈ ಸಮಿತಿ ವರದಿಯನ್ನು ಆಧರಿಸಿ ಹಿಂದುಳಿದ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಿದರು. ತಮ್ಮ ಅಧಿಕಾರವದಿಯಲ್ಲಿ ಸಹಕಾರ ಸದಸ್ಯರಿಗೆ ಯಶಸ್ವಿನಿ ಯೋಜನೆ ಜಾರಿ ಮಾಡಿದರು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಯೋಜನೆ ಜಾರಿ ಮಾಡಿದರು. ಎಸ್‌.ಎಂ.ಕೃಷ್ಣ ಅವರ ಕೊಡುಗೆ ಸ್ಮರಿಸುವ ದೃಷ್ಟಿಯಿಂದ ವಿಧಾನ ಸೌಧದಲ್ಲಿ ಅವರ ಪ್ರತಿಮೆ ನಿರ್ಮಿಸುವಂತೆ ಸಚಿವ ಹೆಚ್‌.ಕೆ.ಪಾಟೀಲ್ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.  

ಸಂತಾಪ ಸೂಚನೆ ನಿರ್ಣಯದ ಮೇಲೆ ವಸತಿ, ವಕ್ಫ್‌ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್‌.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಆರಗ ಜ್ಞಾನೇಂದ್ರ ಸೇರಿದಂತೆ ಇತರೆ ಶಾಸಕರು ಮಾತನಾಡಿ, ಮಾಜಿ ಮುಖ್ಯಮಂತ್ರಿಯವರೊಂದಿಗಿನ ಒಡನಾಟ ಹಾಗೂ ಕೊಡಗೆಯನ್ನು ಸ್ಮರಿಸಿದರು.  

ಎಸ್‌.ಎಂ.ಕೃಷ್ಣ ಗೌರವಾರ್ಥ ಸದನದಲ್ಲಿ ಮೌನಾಚರಣೆ ಆಚರಿಸಿ ಗೌರವ ಸಲ್ಲಿಸಲಾಯಿತು.