ಕೋಲ್ಕತ, ಜ.25 , ದೇಶದ ಎಲ್ಲಾ ಮಹಾ ನಗರಗಳಲ್ಲಿ 2019 ರ ಏಪ್ರಿಲ್-ಡಿಸೆಂಬರ್ ನಡುವೆ ವಿದೇಶಿ ಪ್ರವಾಸಿಗರ ಆಗಮನದಲ್ಲಿ (ಎಫ್‌ಟಿಎ) ಕೊಲ್ಕತ ನಗರ ಅತಿಹೆಚ್ಚು ಬೆಳವಣಿಗೆಯನ್ನು ಕಂಡಿದೆ. ಎಫ್‌ಟಿಎಯಲ್ಲಿ ಕೋಲ್ಕತ ಶೇ 13.3 ರಷ್ಟು ಬೆಳವಣಿಗೆ ಕಂಡಿದ್ದು, ನಗರಕ್ಕೆ ಈ ಅವಧಿಯಲ್ಲಿ 20.3 ಲಕ್ಷ ವಿದೇಶಿಯರು ಆಗಮಿಸಿದ್ದರು.ಪಶ್ಚಿಮ ಬಂಗಾಳದಲ್ಲಿ ನೋಂದಾಯಿಸಲ್ಪಟ್ಟ ಒಟ್ಟು ವಿದೇಶಿ ಪ್ರವಾಸಿಗರ ಸಂಖ್ಯೆಯೂ ಏರಿಕೆಯಾಗಿದ್ದು, ಇದೀಗ ಕೇರಳವನ್ನು ಹಿಂದಿಕ್ಕಿ 6 ನೇ ಸ್ಥಾನಕ್ಕೆ ಏರಿದೆ.
ಕೇವಲ ಐದು ರಾಜ್ಯಗಳು ಪ್ರಸ್ತುತ ಬಂಗಾಳಕ್ಕಿಂತ ಮುಂದಿವೆ.ಪ್ರವಾಸೋದ್ಯಮ, ಸದ್ಯ ರಾಜ್ಯದ ಒಟ್ಟು ದೇಶೀಯ ಉತ್ಪನ್ನ (ಎಸ್‌ಜಿಡಿಪಿ)ಕ್ಕೆ ಶೇ 12.6 ರಷ್ಟು ಕೊಡುಗೆ ನೀಡಿದ್ದರೆ, ರಾಷ್ಟ್ರಮಟ್ಟದಲ್ಲಿ ಸರಾಸರಿ ಶೇ .4 ರಷ್ಟಿದೆ ಎಂದು ರಾಜ್ಯ ಪ್ರವಾಸೋದ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ಬಂಗಾಳಕ್ಕೆ ಬರುವ ವಿದೇಶಿ ಪ್ರವಾಸಿಗರು ಮುಖ್ಯವಾಗಿ ರಷ್ಯಾ, ಜರ್ಮನಿ, ದಕ್ಷಿಣ ಕೊರಿಯಾ, ಥಾಯ್ಲೆಂಡ್, ಚೀನಾ, ಟರ್ಕಿ, ದಕ್ಷಿಣ ಆಫ್ರಿಕಾ, ಜಪಾನ್‌ನಿಂದ ಮತ್ತು ಸಾರ್ಕ್ ಹಾಗೂ ಆಸಿಯಾನ್ ಒಕ್ಕೂಟದ ದೇಶಗಳಿಗೆ ಸೇರಿದವರಾಗಿದ್ದಾರೆ.
ಪಶ್ಚಿಮ ಬಂಗಾಳ ಪ್ರವಾಸೋದ್ಯಮ ಇಲಾಖೆಯು ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದಲ್ಲಿನ ಅಪಾರ ಅವಕಾಶಗಳನ್ನು ಬಳಸಿಕೊಳ್ಳುವತ್ತ ಕೆಲಸ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರವಾಸಿ ತಾಣಗಳ ಬಗ್ಗೆ ಬಂಗಾಳದ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸಿ ಹಬ್ಬಗಳನ್ನು ಆಯೋಜಿಸುತ್ತಿದೆ.