ಸುರಕ್ಷತಾ ನಿಯಮ ಪಾಲಿಸಿ, ಸುರಕ್ಷಾ ಜೀವನ ನಡೆಸಿ- ಡಾ. ಕ್ರಾಂತಿಕಿರಣ

ಸುರಕ್ಷತಾ ನಿಯಮ ಪಾಲಿಸಿ, ಸುರಕ್ಷಾ ಜೀವನ ನಡೆಸಿ- ಡಾ. ಕ್ರಾಂತಿಕಿರಣ Follow safety rules and live a safe life - Dr. Krantikiran

ಹುಬ್ಬಳ್ಳಿ 03 :  ಬೈಕ್ ಚಲಾಯಿಸುವಾಗ ಹೆಲ್ಮೆಟ್, ಕಾರು ಓಡಿಸುವಾಗ ಸೀಟ್ ಬೆಲ್ಟ್‌ ಹಾಕಿಕೊಳ್ಳುವುದು ಕೇವಲ ನಿಯಮ ಪಾಲನೆಗಾಗಿ ಮಾತ್ರವಲ್ಲದೇ, ನಿಮಗಾಗಿ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಎಂಬುದನ್ನು ಯುವಕರು ಮರೆಯಬಾರದು ಎಂದು ಬಾಲಾಜಿ ಆಸ್ಪತ್ರೆ ಚೇರ್ಮನ್ ಮತ್ತು ಖ್ಯಾತ ನರರೋಗ ತಜ್ಞ ಡಾ. ಕ್ರಾಂತಿಕಿರಣ ತಿಳಿಸಿದರು. ಕನಕದಾಸ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಬಾಲಾಜಿ ಆಸ್ಪತ್ರೆ ವತಿಯಿಂದ "ವಿಶ್ವ ತಲೆ ಗಾಯ ಜಾಗೃತಿ ದಿನ" ಅಂಗವಾಗಿ ಗುರುವಾರ ಇಲ್ಲಿನ ಕನಕದಾಸ ಕಾಲೇಜಿನ ಡಾ. ಬಿ.ಎಂ. ದಂಡಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಅರಿವು ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ತಲೆಗೆ ಪೆಟ್ಟಾಗಲು ಹಲವಾರು ಕಾರಣಗಳಿದ್ದರೂ ಸಹ ಅವುಗಳಲ್ಲಿ ವಾಹನ ಅಪಘಾತಗಳೇ ಮೊದಲ ಸ್ಥಾನದಲ್ಲಿವೆ. ವರದಿಯ ಪ್ರಕಾರ ಭಾರತದಲ್ಲಿ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಶೇ.60ರಷ್ಟು ವಾಹನ ಅಪಘಾತಕ್ಕೆ ಈಡಾದವರಾದರೆ, ಶೇ. 20-30 ಬೇರೆ ಬೇರೆ ಕಾರಣಗಳಿಂದ ಬಿದ್ದು ಮತ್ತು ಶೇ.10-20 ಹಲ್ಲೆ ಅಥವಾ ಆಟ ಆಡುವಾಗ ಸಂಭವಿಸುವ  ಅಪಘಾತಗಳಿಂದ ತಲೆಗೆ ಪೆಟ್ಟು ಮಾಡಿಕೊಂಡವರಾಗಿರುತ್ತಾರೆ. ಇಂಡಿಯನ್ ಹೆಡ್ ಇಂಜುರಿ ಫೌಂಡೇಶನ್ ವರದಿ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 1.5 ಮಿಲಿಯನಷ್ಟು ಮೆದುಳಿನ ಗಾಯದ ವರದಿಗಳು ದಾಖಲಾಗುತ್ತಿದ್ದು, 2 ಲಕ್ಷಕ್ಕೂ ಅಧಿಕ ಸಾವು ಸಂಭವಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸರಾಸರಿ 15 ರಿಂದ 44 ವರ್ಷ ವಯಸ್ಸಿನವರೆ ಹೆಚ್ಚಾಗಿ ಸಾವೀಗೀಡಾಗುತ್ತಿದ್ದು, ಭಾರತದಲ್ಲಿ ರಸ್ತೆ ಅಪಘಾತದಿಂದ ಪ್ರತಿ 6 ನಿಮಿಷಕ್ಕೆ ಒಂದರಂತೆ ಸಾವು ಸಂಭವಿಸುತ್ತಿದೆ. ಮುಂದುವರೆದ ದೇಶಗಳಿಗೆ ಹೋಲಿಸಿದರೆ ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಸಾವನ್ನಪ್ಪುತ್ತಿರುವವರ ಪ್ರಮಾಣ ಭಾರತದಲ್ಲೇ ಹೆಚ್ಚಿದೆ. ಆದ್ದರಿಂದ ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು.

ಕೇವಲ ಪೊಲೀಸರಿದ್ದಾರೆ ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸುವುದಾಗಲಿ ಅಥವಾ ಅವರಿಲ್ಲದಿದ್ದಾಗ ನಿಯಮ ಪಾಲಿಸದೇ ವಾಹನ ಚಲಾಯಿಸಿದರೆ ಒಂದೊಮ್ಮೆ ಅಪಘಾತ ಸಂಭವಿಸಿದಲ್ಲಿ ಆಗುವ ಅನಾಹುತದಿಂದ ವೈಯಕ್ತಿಕವಾಗಿ ಮತ್ತು ಕುಟುಂಬದ ಮೇಲೆ ಉಂಟಾಗುವ ಪರಿಣಾಮ ಊಹಿಸಲಸಾಧ್ಯ ಎಂದು ತಿಳಿಸಿದರು.ಕಾಯಕ್ರಮ ಉದ್ಘಾಟಿಸಿದ ಕನಕದಾಸ ಶಿಕ್ಷಣ ಸಂಸ್ಥೆಯ ಸಂದೀಪ ಬೂದಿಹಾಳ್ ಮಾತನಾಡಿ, ರಸ್ತೆ ಅಪಘಾತಗಳಿಂದ ಸಂಭವಿಸುತ್ತಿರುವ ಸಾವು-ನೋವುಗಳ ಪ್ರಮಾಣ ನಿಜಕ್ಕೂ ಆತಂಕ ತರಿಸುತ್ತಿದ್ದು, ಪ್ರತಿ ಸವಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  

ಸಂಚಾರಿ ಸುರಕ್ಷತೆ ಬಗ್ಗೆ ಕಾಲೇಜಿನ ಯುವಕರಲ್ಲಿ ಅರಿವು ಮೂಡಿಸಿ ಜಾಗರೂಕರನ್ನಾಗಿಸಿದ  ಬಾಲಾಜಿ ಆಸ್ಪತ್ರೆ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪ್ರಶಂಶಿಸಿದರು.ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ರಸ್ತೆ ಸುರಕ್ಷತೆ, ಅಪಘಾತಗಳಿಂದ ಮಿದುಳಿಗೆ ಹಾನಿಯಾಗಿ ಸಂಭವಿಸಬಹುದಾದ ಸಾವುಗಳನ್ನು ತಡೆಗಟ್ಟುವ ವಿಧಾನ, ಅಪಘಾತವಾಗದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಒಂದೊಮ್ಮೆ ಅಪಘಾತ ಸಂಭವಿಸಿದರೆ ಸಾವು ಹಾಗೂ ಅಂಗವಿಕಲತೆಯನ್ನು ತಪ್ಪಿಸಬಹುದಾದ ಕುರಿತು ಮತ್ತು ಅಪಘಾತದ ಬಳಿಕ ಸಾವು-ನೋವು ಉಂಟಾದಾಗ ಸಾರ್ವಜನಿಕರ ಜವಾಬ್ದಾರಿ ಏನು? ಎಂಬಿತ್ಯಾದಿ ವಿಷಯಗಳ ಕುರಿತು ಸಂವಾದ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಜಿ. ಮಡ್ಲಿ, ಡಾ. ಎನ್‌. ಡಿ. ಶೇಖ್, ಪ್ರೊ. ಬೀರೇಶ್ ತಿರುಕಪ್ಪನವರ, ಮಹೇಶ್‌. ಎಲ್, ಸೇರಿದಂತೆ ಇನ್ನಿತರ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.