ಜನಪದ ಸಾಹಿತ್ಯ ಹೆಣ್ಮಕ್ಕಳ ಹೃದಯದ ಪಡಿಗನ್ನಡಿ

ಲೋಕದರ್ಶನ ವರದಿ

ಗೋಕಾಕ 04: ನಮ್ಮ ತಾಯಿ-ತಂಗಿ, ಅಮ್ಮ-ಅಕ್ಕ, ಮಡದಿ-ಮಕ್ಕಳು ತಮ್ಮ ಹೃದಯದ ಭಾವ-ಭಾವನೆ, ಅನಿಸಿಕೆ-ಅಭಿಪ್ರಾಯಗಳನ್ನು ಕುಟ್ಟುವಾಗ, ಬೀಸುವಾಗ, ಕಳೆ ಕೀಳುವಾಗ, ಜೋಗುಳ ಹೇಳುವಾಗ,  ಆಡುವಾಗ, ಆಯಾಸ ನಿವಾರಣೆಗೆ ಮತ್ತು ಸುಖ ಸಂತೋಷಕ್ಕಾಗಿ ತೋಡಿಕೊಂಡರು. ಅದೆಲ್ಲ ಅವರ ಹಾಡು, ಕಥೆ, ಗಾದೆ, ಒಗಟು, ಒಡಪು ರೂಪಗಳಲ್ಲಿ ಅಭಿವ್ಯಕ್ತಗೊಂಡಿತು. ಹೀಗೆ ಹೆಣ್ಮಕ್ಕಳ ಹೃದಯದ ಪಡಿಗನ್ನಡಿಯಾಗಿ ವ್ಯಕ್ತಗೊಂಡುದೆ ಜನಪದ ಸಾಹಿತ್ಯವೆಂದು ಜನಪದ ವಿದ್ವಾಂಸ ಡಾ| ಸಿ.ಕೆ.ನಾವಲಗಿ ಅಭಿಪ್ರಾಯಿಸಿದರು.

ಅವರು ಕರ್ನಾಟಕ ಜಾನಪದ ಪರಿಷತ್ತು, ಬೆಳಗಾವಿ ಜಿಲ್ಲಾ ಘಟಕ, ಜಾಗೃತಿ ಮಹಿಳಾ ಸಮಾಜ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ 4 ರಂದು ನಗರದ ಶಂಕರಲಿಂಗ ದೇವಸ್ಥಾನದಲ್ಲಿ ಹಮ್ಮಿಕೊಂಡ 'ಭೂಮಿ ಬಳಗ' ಜಾನಪದ ಸಂಘಟನೆಯನ್ನು, ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತ, ಮುಂಬರುವ ಹತ್ತು ವರ್ಷಗಳಲ್ಲಿ ಜನಪದ ಸಾಹಿತ್ಯಕ್ಕೆ, ಜನಪದ ಕಲಾವಿದರಿಗೆ, ಜನಪದ ಸಂಸ್ಕೃತಿಗೆ ಎಲ್ಲಿಲ್ಲದ ಮಹತ್ವ ದೊರೆತು, ಹಳ್ಳಿಗರ ಕುಲಕಸಬು ವ್ಯವಸಾಯ ಕೂಡ ಪುನರುತ್ಥಾನಗೊಳ್ಳುವ ಎಲ್ಲ ಸಾಧ್ಯತೆಗಳಿವೆಯೆಂದು ನುಡಿದರು. 

ಜಾನಪದ ಸಾಹಿತ್ಯ ಉಳಿದು ಬೆಳೆಯಲು ನನ್ನಿಂದಾದ ಎಲ್ಲ ಸಹಾಯ ಸಹಕಾರ ನೀಡುವುದಾಗಿ, ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಅವರು ಭರವಸೆ ನೀಡಿದರು. ಸ್ಥಳೀಯರಿಂದ ಸೃಷ್ಟಿಗೊಂಡ ಜನಪದ ಸಾಹಿತ್ಯ, ಕಲೆ, ಸಂಸ್ಕೃತಿ, ಆಚರಣೆಗಳನ್ನು ದಾಖಲೀಕರಣಗೊಳಿಸುವ ಕಾರ್ಯ ತೀವ್ರವಾಗಿ ನಡೆಯಬೇಕೆಂದು ರೂಪಾ ಮುನವಳ್ಳಿ ಸಲಹೆ ನೀಡಿದರು. ಮಹಾಂತೇಶ ತಾಂವಶಿ ಕೂಡ ಮಾತನಾಡಿದರು.

ಭೂಮಿ ಬಳಗದ ದ್ಯೇಯೋದ್ಧೇಶಗಳನ್ನು ಡಾ. ಶಶಿಕಲಾ ಕಾಮೋಜಿಯವರು ಅಧ್ಯಕ್ಷ ಸ್ಥಾನದಿಂದ ವಿವರಿಸಿದರು. ಇದೇ ಸಂದರ್ಭದಲ್ಲಿ ಈಚೆಗೆ ರಾಜ್ಯಮಟ್ಟದ ಜಾನಪದ, ವಿದ್ವತ್ ಗೌರವಕ್ಕೆ ಭಾಜನರಾದ ಡಾ| ಸಿ.ಕೆ.ನಾವಲಗಿಯವರನ್ನು ಸತ್ಕರಿಸಲಾಯಿತು. ಬಾಲಚಂದ್ರ ಕುಬಸದ, ಐ.ವಿ.ಕೌತನಾಳಿ, ಮಹಾಂತೇಶ ರೇಶ್ಮಿ ಗೌರವ ಉಪಸ್ಥಿತರಿದ್ದರು. 

ಪುಷ್ಪಾ ಹಿಂಡಿಹೊಳಿ ತಂಡದವರಿಂದ 'ಕೆರೆಗೆ ಹಾರ', ಶಿವಲೀಲಾ ಆಲತಗಿ ತಂಡದವರಿಂದ 'ಒಂದಾಗಿ ದುಡಿಯೋಣ, ಒಂದಾಗಿ ಬಾಳೋಣ' ರೂಪಕಗಳು ಸುಂದರವಾಗಿ ಪ್ರದಶರ್ಿತಗೊಂಡವು. ದೀಪಾ ದಳವಾಯಿ, ಪ್ರತಿಭಾ ಮೂರ್ತೆಲಿ ಆಕರ್ಷಕವಾಗಿ ಜನಪದ ನೃತ್ಯಗೈದರು.

ಶೈಲಾ ಮತ್ತು ರೂಪಾ ಮೂರ್ತೆಲಿ ಪ್ರಾರ್ಥಿಸಿದರು, ಜ್ಯೋತಿ ದೊಡ್ಡಣ್ಣವರ ಸ್ವಾಗತ ಗೀತೆ ಹಾಡಿದರು, ಶಶಿಕಲಾ ಕೌತನಾಳಿ ಸ್ವಾಗತಿಸಿದರು, ವಿನೂತಾ ನಾವಲಗಿ ಪರಿಚಯಿಸಿದರು, ಪುಷ್ಪಾ ಹಿಂಡಿಹೊಳಿ ವಂದಿಸಿದರು, ವಿದ್ಯಾ ಗುಲ್ಲ ನಿರೂಪಿಸಿದರು.