ಜನಪದ ಜಾತ್ರೆ ವಿಶೇಷ ಕಾರ್ಯಕ್ರಮ

ಲೋಕದರ್ಶನ ವರದಿ

ಅಥಣಿ 05:  ಕೆಎಲ್ಇ ಸಂಸ್ಥೆಯ ಸ್ಥಳೀಯ ಎಸ್ಎಸ್ಎಮ್ಎಸ್ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ, ಕನ್ನಡ ಸಾಹಿತ್ಯ ಸಂಘದ ವತಿಯಿಂದ 'ಜನಪದ ಜಾತ್ರೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಾವಿದ್ಯಾಲಯದಲ್ಲಿ ಜಾನಪದ ಹಬ್ಬ ನಡೆದಿರುವಂತಿತ್ತು, ಮಹಾವಿದ್ಯಾಲಯದ ಮುಖ್ಯದ್ವಾರಗಳಿಗೆಲ್ಲ ಹೂವು, ಹಣ್ಣು, ಮಾವಿನ ತೋರಣ, ಬಾಳೆ, ತೆಂಗು, ಕಬ್ಬುಗಳೆಲ್ಲವನ್ನು ಕಟ್ಟಿ ಜೋಡಿಸಿ ಅಲ್ಲಲ್ಲಿ ಜಾನಪದ ಸೊಗಡಿನ ಚಿತ್ರಗಳನ್ನೂ ಸಹ ಬಿಡಿಸಲಾಗಿತ್ತು, ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಪ್ರಾಧ್ಯಾಫಕಿಯರು, ಬೋಧಕೇತರ ಸಿಬ್ಬಂದಿ ಎಲ್ಲರೂ ಸಹ ಜಾನಪದ ವೇಷಗಳಲ್ಲಿ ಬಂದಿರುವುದು ವಿಶೇಷವೆನಿಸಿತು. 

ಸಮಾರಂಭದಲ್ಲಿ ಬಾಡಗಿಯ ಜಾನಪದ ಕಲಾವಿದರಾದ ದುಂಡಪ್ಪ ಪೂಜಾರಿ  ಭಾಗವಹಿಸಿ ಮೂಲ ಜನಪದ ಕಾವ್ಯ ಪ್ರಕಾರಗಳಾದ ಸೋಬಾನ ಪದಗಳನ್ನು, ಕೋಲಾಟದ ಪದಗಳನ್ನು, ದೇವತಾ ಸ್ತುತಿಗಳನ್ನು ರಾಗ, ಭಾವ, ಲಯ ತುಂಬಿ ಹಾಡಿ ವಿದ್ಯಾರ್ಥಿಗಳನ್ನು ಮನರಂಜಿಸಿದರು. 

ಸಮಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್. ಎಫ್. ಇಂಚಲ  ಮಾತನಾಡಿ ಜನಪದ ಸಾಹಿತ್ಯವು ಶ್ರಮಿಕರಿಂದ ಹುಟ್ಟಿಕೊಂಡಿದೆ. ಅವರು ಹೊಲದಲ್ಲಿ ಕೆಲಸ ಮಾಡುವಾಗ, ಎತ್ತುಗಳ ಜೊತೆ ರೆಂಟೆ  ಕುಂಟೆ ಹೊಡೆಯುವಾಗ, ಬಿತ್ತುವಾಗ, ಬೆಳೆಗಳಿಗೆ ನೀರು ಹಣಿಸುವಾಗ, ಹಕ್ಕಿ ಕಾಯುವಾಗ, ಬೆಳೆಗಳನ್ನು ಕೊಯ್ಯುವಾಗ, ರಾಶಿ ಮಾಡುವಾಗ, ಕುಟ್ಟುವಾಗ, ಕೇರುವಾಗ, ಬೀಸುವಾಗ, ಮುಂತಾದ ಸಂದರ್ಭಗಳಲ್ಲಿ ದೇಹ ದಣಿದು, ಮನಸ್ಸು ಬೇಸತ್ತಾಗ ಆ ಬೇಸರಿಕೆಯನ್ನು ನಿವಾರಿಸಿಕೊಳ್ಳಲು ತಮ್ಮ ಮನಸ್ಸಿನ ಆನಂದಕ್ಕಾಗಿ, ಮನರಂಜನೆಗಾಗಿ ಹಾಡಿನ ರೂಪದಲ್ಲಿ ಜಾನಪದಗಳು ಹುಟ್ಟಿಕೊಂಡವು. ಜಾನಪದ ಸಾಹಿತ್ಯ ದಿನನಿತ್ಯದ ಜೀವನದಲ್ಲಿ ಆಗುವಂತಹ ಘಟನೆಗಳನ್ನೇ ಸುಂದರವಾಗಿ ಪ್ರಾಸಬದ್ಧವಾಘಿ ಹೇಳಿದಂತಹ ಸಾಹಿತ್ಯ, ಆದರೆ ಈ ಸಾಹಿತ್ಯದಲ್ಲಿ ಜಾನಪದರ ಮೂ ಬೇರಿದೆ ಎಂದ ಅವರು ಜನಪದರ ಶ್ರೀಮಂತ, ಜೀವಂತ ಸಾಹಿತ್ಯವು ಹುಟ್ಟಿ ಬಾಯಿಂದ ಬಾಯಿಗೆ ಬೆಳೆದು ಬಂದುದರ ಬಗ್ಗೆ ಸವಿವರವಾಗಿ ತಿಳಿಸಿದರು. 

ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಜನಪದ ಸೊಗಡಿನ ಹಲವಾರು ನೃತ್ಯಗಳನ್ನು ಪ್ರದರ್ಶಿಸಿದರು. ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ, ಕುಣಿಗಲ್ ಕುಣಿಗಲ್ ಕೆರೆ, ಚೆಲುವಯ್ಯ ಚೆಲುವೊ ತಾನೆತಂದನಾ ನಿನ್ನ ಮಾಯಾರಕ್ಕೆ ಕೋಲೆನ್ನ ಕೋಲೆ, ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ, ಎನ್ ಕೊಡಾ ಎನ್ ಕೊಡವ್ವಾ ಹುಬ್ಬಳ್ಳಿ ಮಾಟಾ, ಚನ್ನಪ್ಪ ಚನ್ನಗೌಡಾ ಮುಂತಾದ ಜನಪದ ಹಾಡುಗಳಿಗೆ ಸುಂದರ ನೃತ್ಯವನ್ನು ಸಂಯೋಜಿಸಿ ಮನರಂಜನೆ ನೀಡಿದರು.  

ಪ್ರಾರಂಭದಲ್ಲಿ ಆನಂದ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಆರ್. ಸಿದ್ದಗಂಗಮ್ಮ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಾಹಿತ್ಯ ಸಂಘದ ಕಾರ್ಯಾಧಕ್ಷರಾದ ಡಾ. ಬಿ. ಎಸ್. ಗದ್ದಿ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ. ಎಸ್. ವ್ಹಾಯ್. ಹೊನ್ನುಂಗುರ ಉಪಸ್ಥಿತರಿದ್ದರು. 

ಕಲಾವಿದೆಯರಾದ ಅನ್ನಪೂರ್ಣ ಐನಾಪೂರ, ಪುಲಾಬಾಯಿ ಮಾದರ, ಕುಸುಮಾ ಬಜಂತ್ರಿ, ನಿಂಬೆವ್ವಾ ಗುರಕಿ ಇವರಿಂಧ ಜನಪದ ಹಾಡುಗಳು ಸೋಬಾನೆ ಪದಗಳನ್ನು ಹಾಡಿದರು. ವೇದಿಕೆಯ ಮೇಲೆ ಡಾ. ವಿಜಯ ಕಾಂಬಳೆ ಉಪಸ್ಥಿತರಿದ್ದರು. ಶ್ರೀದೇವಿ ಖಿದ್ರಾಪುರೆ ಹಾಗೂ ಅಕ್ಷತಾ ಬಡಿಗೇರ ನೀರೂಪಿಸಿದರು, ಲಕ್ಷ್ಮಿ ಕುರುಬರ ವಂದಿಸಿದರು. 

ಕಾರ್ಯಕ್ರಮದ ನಂತರ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಬದನೆಕಾಯಿ ಪಲ್ಲೆ, ಮೊಸರು, ಅಗಸಿ ಚಟ್ನಿ, ಶೇಂಗಾ ಚಟ್ನಿ, ಕಾರೆಳ್ಳು ಚಟ್ನಿ, ಉಪ್ಪಿನಕಾಯಿ, ಅನ್ನ, ಸಾರು ಮುಂತಾದ ಹಲವಾರು ತರಹದ ಜನಪದ ಶೈಲಿಯ ಸವಿ ಸವಿ ರುಚಿ ರುಚಿ ವೈಶಿಷ್ಟ್ಯಪೂರ್ಣವಾದ ಊಟ ಕಾರ್ಯಕ್ರಮದ ಸ್ವಾದವನ್ನು ಹೆಚ್ಚಿಸಿತ್ತು. ಒಟ್ಟಾರೆ ಈ ಜನಪದ ಜಾತ್ರೆ ಹಳ್ಳಿಯ ಸೊಗಡು ನೆನಪಿಸಿತು.