ಮಾನವ ಸಂಕುಲದ ಒಳಿತಿಗಾಗಿ ಬಹುಪಕ್ಷೀಯ ವೇದಿಕೆಗಳನ್ನು ಕೇಂದ್ರೀಕರಿಸಿ; ಜಿ. 20 ದೇಶಗಳ ನಾಯಕರಿಗೆ ಮೋದಿ ಕರೆ

ನವದೆಹಲಿ,ಮಾ ೨೭,ಮಾನವೀಯ  ಹಿತಾಸಕ್ತಿಗಳ  ವಿನಿಮಯ,    ಮಾನವ ಸಂಕುಲದ  ಒಳಿತಿಗಾಗಿ  ಬಹುಪಕ್ಷೀಯ ವೇದಿಕೆಗಳನ್ನು   ಕೇಂದ್ರೀಕರಿಸಿ     ಹೊಸ ಜಾಗತೀಕರಣ  ವ್ಯವಸ್ಥೆ ರೂಪಿಸಲು   ನೆರವಾಗಬೇಕೆಂದು    ಪ್ರಧಾನಿ ನರೇಂದ್ರ ಮೋದಿ ಜಿ -೨೦ ದೇಶಗಳ  ನಾಯಕರಿಗೆ   ಕರೆ ನೀಡಿದ್ದಾರೆ. ಕಳೆದ ರಾತ್ರಿ ವರ್ಚುವಲ್ ಜಿ -೨೦  ಗುಂಪಿನ  ದೇಶಗಳ   ನಾಯಕರ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸ್ ನಲ್ಲಿ   ಉದ್ದೇಶಿಸಿ  ಮಾಡಿದ  ಭಾಷಣದಲ್ಲಿ, ಪ್ರಧಾನಿ ಮೋದಿ,  ಜಾಗತಿಕ ಸಮೃದ್ಧಿ ಹಾಗೂ ಸಹಕಾರದಲ್ಲಿ   ಮನುಷ್ಯ ಸಂಕುಲವನ್ನು  ಕೇಂದ್ರವನ್ನಾಗಿಸುವ   ಅಗತ್ಯವನ್ನು ಒತ್ತಿಹೇಳಿದ್ದಾರೆ. ವೈದ್ಯಕೀಯ ಸಂಶೋಧನೆ ಮತ್ತು ಅಭಿವೃದ್ಧಿಯ ಫಲಗಳನ್ನು  ಮುಕ್ತ ಮತ್ತು ಬಹಿರಂಗವಾಗಿ ಹಂಚಿಕೊಳ್ಳುವುದು, ಪರಸ್ಪರ ಸ್ಪಂದಿಸುವ ಮತ್ತು ಮಾನವೀಯ ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ಬಿಕ್ಕಟ್ಟು ನಿರ್ವಹಣೆಯ ಹೊಸ   ಶಿಷ್ಟಾಚಾರ  ರೂಪಿಸುವ  ಪ್ರಾಮುಖ್ಯತೆಯನ್ನು  ಮೋದಿ ಸಭೆಯಲ್ಲಿ  ಒತ್ತಿ ಹೇಳಿದರು.ಕೋವಿಡ್ -೧೯ ಸಾಂಕ್ರಾಮಿಕದಿಂದ   ಎದುರಾಗಿರುವ  ಸವಾಲುಗಳನ್ನು ಚರ್ಚಿಸಲು ಮತ್ತು ಜಾಗತಿಕ ಸಂಘಟಿತ ಪ್ರತಿಕ್ರಿಯೆಯನ್ನು ಚರ್ಚಿಸಲು  ಈ ಶೃಂಗಸಭೆ   ಆಯೋಜಿಸಲಾಗಿತ್ತು. ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸ್ಪಷ್ಟ  ಕ್ರಿಯಾ ಯೋಜನೆಯನ್ನು ರೂಪಿಸಲು ಜಿ ೨೦  ದೇಶಗಳ ನಾಯಕರಿಗೆ  ಮೋದಿ ಕರೆ ನೀಡಿದರು. ಶೇ   ೯೦ ರಷ್ಟು ಕೋವಿಡ್  -೧೯ ಪ್ರಕರಣಗಳು  ಹಾಗೂ  ಶೇ ೮೮ ಸಾವುಗಳು ಜಿ ೨೦ ಗುಂಪಿನ   ದೇಶಗಳಲ್ಲಿ ಸಂಭವಿಸಿವೆ  ಎಂದು ಪ್ರಧಾನಿ ಹೇಳಿದರು.ಕೋವಿಡ್  -೧೯ ಸಾಂಕ್ರಮಿಕವನ್ನು ತಡೆಗಟ್ಟಲು,  ಜನರನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಜಿ ೨೦ ನಾಯಕರು ಸಭೆಯಲ್ಲಿ ಸಮ್ಮತಿಸಿದರು. ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಪರಿಕರಗಳ ಸರಬರಾಜು, ರೋಗ ನಿರ್ಧರಣ ಸಾಧನಗಳು, ಚಿಕಿತ್ಸೆಗಳು, ಔಷಧಿಗಳು ಮತ್ತು ಲಸಿಕೆ  ಒಳಗೊಂಡಂತೆ ವಿಶ್ವ ಆರೋಗ್ಯ  ಸಂಸ್ಥೆಯ   ಸೂಚನೆಯನ್ನು  ಅವರು ಬೆಂಬಲಿಸಿದರು.
ಕೋವಿಡ್ -೧೯   ಉಂಟುಮಾಡಿರುವ  ಸಾಮಾಜಿಕ ಮತ್ತು ಆರ್ಥಿಕ ಪರಿಣಾಮ  ಎದುರಿಸಲು ಜಿ -೨೦ ದೇಶಗಳು ಜಾಗತಿಕ ಆರ್ಥಿಕತೆಗೆ ೫ ಟ್ರಿಲಿಯನ್ ಡಾಲರ್‌ಗಳನ್ನು   ಒದಗಿಸಲು  ಬದ್ಧವಾಗಿವೆ.
ವಿಶ್ವ ಆರೋಗ್ಯ  ಸಂಸ್ಥೆಯ  ನೇತೃತ್ವದ  ಕೋವಿಡ್  -೧೯ ಸ್ವಯಂ ಪ್ರೇರಿತ  ಪ್ರತಿಕ್ರಿಯಾ ನಿಧಿಗೆ  ಸ್ವಯಂಪ್ರೇರಿತ ಆಧಾರದ ಮೇಲೆ  ದೇಣಿಗೆ  ನೀಡಲು ಜಿ ೨೦ ಗುಂಪಿನ ನಾಯಕರು ಸಮ್ಮತಿಸಿದರು.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಂಘಟಿತ ಜಾಗತಿಕ ಪ್ರತಿಕ್ರಿಯೆ, ಜಾಗತಿಕ ಆರ್ಥಿಕತೆ  ರಕ್ಷಿಸಲು   ಕ್ರಮ  ಕೈಗೊಳ್ಳುವುದು,  ಪರಸ್ಪರ  ದೇಶಗಳ ನಡುವೆ  ವ್ಯಾಪಾರ   ಅಡಚಣೆಗಳನ್ನು  ತಗ್ಗಿಸುವುದು ಹಾಗೂ ಜಾಗತಿಕ ಸಹಕಾರ  ವೃದ್ಧಿಸುವ  ಕ್ರಮ ಕೈಗೊಳ್ಳುವ ನಿರ್ಣಯಗಳನ್ನು  ಶೃಂಗಸಭೆ  ಅಂತ್ಯದಲ್ಲಿ  ಘೋಷಿಸಲಾಯಿತು.