ಬೀಜಿಂಗ್ ಜೂನ್ 11: ಚೀನಾದ ಆಗ್ನೇಯ ಭಾಗದ ಜಿಯಾಂಗ್ಸಿ ಪ್ರಾಂತ್ಯದಲ್ಲಿ ಸುರಿಯುತ್ತಿರುವ ತೀವ್ರವಾದ ಗಾಳಿ, ಆಲಿಕಲ್ಲು ಮತ್ತು ಮಳೆಬಿರುಗಾಳಿಯಿಂದ ಕೂಡಿದ ಮಳೆಯಿಂದ ಉಂಟಾದ ಪ್ರವಾಹಗಳಿಂದ 150,000 ಮಂದಿ ಸ್ಥಳಾಂತರಗೊಂಡಿದ್ದು, ಅಪಾರ ಪ್ರಮಾಣದ ಬೆಳೆ ಮತ್ತು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಗುರುವಾರದಿಂದ ಆರಂಭಗೊಂಡು ಈ ಪ್ರಾಂತ್ಯದ ಈಶಾನ್ಯ, ಕೇಂದ್ರೀಯ ಭಾಗಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಇದರಿಂದ 23 ಜಿಲ್ಲೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಹದಿಂದ 338,000 ಎಕರೆ ಬೆಳೆದು ನಿಂತಿದ್ದ ಬೆಳೆ ನಷ್ಟವಾಗಿದ್ದು, 1,350 ಮನೆಗಳು ಹಾನಿಗೊಂಡಿವೆ ಎಂದು ಜಿಯಾಂಗ್ಸಿ ಪ್ರಾಂತೀಯ ತುರ್ತುಸ್ಥಿತಿ ನಿರ್ವಹಣಾ ಬ್ಯೂರೋ ತಿಳಿಸಿದೆ.
ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಿಗೆ 700 ಅಗ್ನಿಶಾಮಕ ಸಿಬ್ಬಂದಿ ಮತ್ತು 200 ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರವಾಹದಿಂದ 540 ದಶಲಕ್ಷ ಡಾಲರ್ ನಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಭಾರಿ ಮಳೆ ಹಾಗೂ ಪ್ರವಾಹಗಳಿಂದ ಇದುವರೆಗೆ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ತಿಳಿಸಿದ್ದು, ಆದರೆ ಸಾವಿನ ಸಂಖ್ಯೆ ಅಧಿಕೃತವಾಗಿ ಧೃಡಪಟ್ಟಿಲ್ಲ.