ಪ್ರವಾಹ ಸಮಯ: ಸರ್ಕಾರದ ಮಾರ್ಗಸೂಚಿಯಂತೆ ಕ್ರಮಕ್ಕೆ ಆದೇಶ
ಕಾರವಾರ : ಪ್ರವಾಹ ಕುರಿತು ಸರಕಾರದ ಮಾರ್ಗಸೂಚಿಯಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡ ಪ್ರವಾಹ ಪರಿಸ್ಥಿತಿಯ ಪರಿಶೀಲನೆಗಾಗಿ ಜಿಲ್ಲೆಗೆ ಭೇಟಿ ನೀಡಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ.ಮೋಹನರಾಜ್ ಜಿಲ್ಲಾಧಿಕಾರಿ ಕಛೇರಿಯಲ್ಲಿ ರವಿವಾರ ಸಭೆ ನಡೆಸಿದರು. ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳೊಂದಿಗೆ ಪ್ರವಾಹ ಪರಿಹಾರ ಕಾರ್ಯಗಳ ಕುರಿತು ಚರ್ಚಿಸಿದರು. ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಾಳಜಿ ಕೇಂದ್ರಗಳನ್ನು ಸರಕಾರದ ಮಾರ್ಗಸೂಚಿಯಂತೆ ಸಿದ್ದಪಡಿಸಲು ಹಾಗೂ ಪ್ರಸ್ತುತ ಕೊವಿಡ್ ಪರಿಸ್ಥಿತಿ ಇರುವದರಿಂದ ಕೊವಿಡ್-19 ಮಾರ್ಗಸೂಚಿಯಂತೆ ಕಾಳಜಿ ಕೇಂದ್ರದಲ್ಲಿ ಸೂಕ್ತ ಮುನ್ನೆಚ್ಚರಿಕೆಯನ್ನು ವಹಿಸುವಂತೆ ತಿಳಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಈವರೆಗಿನ ಮಳೆ ಹಾಗೂ ಪ್ರವಾಹದಿಂದ ಬಾಧಿತರಾದ ಸಂತ್ರಸ್ಥರಿಗೆ ಕೂಡಲೇ ಪರಿಹಾರ ನೀಡುವಲ್ಲಿ ಕ್ರಮ ಕೈಗೊಳ್ಳಲು ತಿಳಿಸಿದರು. ಇಗಾಗಲೇ ಜಿಲ್ಲೆಯ ಎಲ್ಲಾ ಜಲಾಶಯಗಳು ಬಹುತೇಕ ಭರ್ತಿಯಾಗುವ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಕೂಡಾ ತೀವ್ರ ಮಳೆಯಾಗುವ ಸಾಧ್ಯತೆಗಳು ಇರುವದರಿಂದ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುಗಡೆಗೊಳಿಸುವ ಕುರಿತು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸಿದರು. ಜಿಲ್ಲೆಯಲ್ಲಿನ ಕೊವಿಡ್-19 ಪರಿಸ್ಥಿತಿಯ ಬಗ್ಗೆ ಕೂಡಾ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಪ್ರವಾಹ ಪರಿಹಾರ ಕಾರ್ಯದ ಜೊತೆಗೆ ಕೊವಡ್ ಪರಿಸ್ಥಿತಿಯ ನಿರ್ವಹಣೆ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ತೆದುಕೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್.ಕೆ, ಅಪರ ಜಿಲ್ಲಾಧಿಕಾರಿಗಳಾದ ಕೃಷ್ಣಮೂರ್ತಿ ಹೆಚ್. ಕೆ, ಜಿಲ್ಲಾ ಸಮಾಲೋಚಕರಾದ ವಿಘ್ನೇಶ ಶ್ರೀನಿವಾಸನ್ ಹಾಗೂ ಇತರರು ಹಾಜರಿದ್ದರು.