ಮದುರೈ ಸಮೀಪ ಎರಡು ಕಾರುಗಳ ಭೀಕರ ಡಿಕ್ಕಿ: ಐವರು ಸಾವು, ಇಬ್ಬರಿಗೆ ಗಾಯ

ಮದುರೈ ಸಮೀಪ ಎರಡು ಕಾರುಗಳ ಭೀಕರ ಡಿಕ್ಕಿ: ಐವರು ಸಾವು, ಇಬ್ಬರಿಗೆ ಗಾಯ Five Killed, Two Injured in Head-on Car Collision Near Madurai

ಮದುರೈ, ಆ. 5: ತಮಿಳುನಾಡಿನ ಮದುರೈ ಜಿಲ್ಲೆಯ ಮೆಲೂರು ಸಮೀಪ ಸೋಮವಾರ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಬಾಲಕಿ ಸೇರಿದಂತೆ ಐವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಡಿಕ್ಕಿಯ ತೀವ್ರತೆಗೆ ಎರಡೂ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ ಎಂದು ವರದಿಗಳು ತಿಳಿಸಿವೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾರುಗಳಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.