ಗ್ರಾಮೀಣ ರಸ್ತೆಗಳ ಸುಧಾರಣೆಗೆ ಪ್ರಥಮ ಆದ್ಯತೆ: ಶಾಸಕ ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಪ್ರಥಮ ಆದ್ಯತೆ: ಶಾಸಕ ನಾಡಗೌಡ  First priority is to improve rural roads: MLA Nadagowda

ತಾಳಿಕೋಟಿ 23: ಗ್ರಾಮಗಳು ಸುಧಾರಣೆಗೊಂಡರೆ ದೇಶದ ಪ್ರಗತಿ ಸಾಧ್ಯವಾಗುತ್ತದೆ ಇವು ಒಂದಕ್ಕೊಂದು ಪೂರಕವಾಗಿವೆ. ಆದ್ದರಿಂದ ಮತಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮಗಳ ಮೂಲಭೂತ ಸೌಕರ್ಯ ಅದರಲ್ಲೂ ವಿಶೇಷವಾಗಿ ರಸ್ತೆ ಸುಧಾರಣೆಗೆ ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್‌.ನಾಡಗೌಡ(ಅಪ್ಪಾಜಿ) ಹೇಳಿದರು.

ತಾಲೂಕಿನ ಬಳಗಾನೂರ ಕ್ರಾಸ್ ಬಳಿ ಬಳಗಾನೂರದಿಂದ ಸಾಸನೂರ ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ಕೇಂದ್ರ ರಸ್ತೆ ನಿಧಿ ಯೋಜನೆಯ ರೂ.600 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲಾಗುವುದು ಇದಕ್ಕೆ ಕ್ಷೇತ್ರದ ಜನರ ಸಹಕಾರ ನನಗೆ ಬೇಕು ಎಂದರು. ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿ ಶಾಸಕ ಅಪ್ಪಾಜಿ ಅವರು ನುಡಿದಂತೆ ನಡೆಯುವ ವ್ಯಕ್ತಿ ಅವರ ಮಾತು ಕಡಿಮೆ ಆದರೆ ಕೆಲಸ ಹೆಚ್ಚು, ಅವರು ಪ್ರಚಾರ ಪ್ರಿಯರಲ್ಲ, ಜನರ ಪ್ರಾಮಾಣಿಕ ಸೇವೆ ಮಾಡುವ ಕಾಳಜಿ ಹೊಂದಿದವರಾಗಿದ್ದಾರೆ. ಇವತ್ತು ಎರಡು ವರ್ಷದ ಅವಧಿಯಲ್ಲಿ 200 ಕೋಟಿಯ ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಈಗಾಗಲೇ ಹಲವಾರು ಕಾಮಗಾರಿಗಳು ಮುಗಿದಿದ್ದರೆ ಕೆಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಇನ್ನೂ ಮೂರು ವರ್ಷಗಳ ಅವಧಿ ಅವರ ಬಳಿ ಇದೆ ಸಾಕಷ್ಟು ಕೆಲಸ ಮಾಡುವ ಅವಕಾಶವಿದೆ ಇದಕ್ಕೆ ನಮ್ಮೆಲ್ಲರ ಸಹಕಾರ ಅವರಿಗೆ ಬೇಕು ಈ ಭಾಗದ ಜನರ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು. ತಾಳಿಕೋಟಿ ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಪ್ರಸ್ತಾವಿಕವಾಗಿ ಮಾತನಾಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ಕಂಠಯ್ಯ ಮುತ್ಯಾ, ಮುಖಂಡರಾದ ಶರಣಭೂಪಾಲ ದೇಶಮುಖ, ಪ್ರಕಾಶ ಪಾಟೀಲ ತಮ್ದೊಡ್ಡಿ, ಗುತ್ತಿಗೆದಾರ ಬಿ.ಎಂ. ಅರಳಿಕೋಟಿ, ಬಸನಗೌಡ ಬಗಲಿ, ಸಂಗಣ್ಣ ಸಾಹುಕಾರ ಬಿರಾದಾರ, ಸಂಗನಗೌಡ ಅಸ್ಕಿ, ಮಲ್ಲನಗೌಡ ಯಾದಗಿರಿ, ಚೆನ್ನಣ್ಣ ದೇಸಾಯಿ, ಮಲ್ಲಣ್ಣ ದೋರನಹಳ್ಳಿ, ಕಡಕೋಳ ಸರ್, ಚಂದ್ರಶೇಖರ ಸಾಸನೂರ, ಶಾಂತಗೌಡ ಕೊಣ್ಣೂರ ಮತ್ತೀತರರು ಇದ್ದರು. ಗಾಯಕ ಹೈದರಶಾ ಮಕಾನದಾರ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕ ಆರ್‌.ಎಸ್‌.ವಾಲಿಕಾರ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.