ಲೋಕದರ್ಶನ ವರದಿ
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಪ್ರಥಮ ಜಿಲ್ಲಾ ಸಮ್ಮೇಳನ
ವಿಜಯಪುರ, 18; ಇಂದು ದಿ ಮಾ, 18ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಸಮ್ಮೇಳನಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದಿದ್ದ ಎಐಎಮ್‌ಎಸ್‌ಎಸ್ ರಾಜ್ಯಾಧ್ಯಕ್ಷರಾದ ಮಂಜುಳಾ ಎಮ್ ಎನ್ ರವರು ಮಾತನಾಡುತ್ತಾ ಸ್ತ್ರೀಯರ ಮೇಲೆ ದಿನೇ ದಿನೇ ಹಿಂಸೆ, ಕ್ರೌರ್ಯ, ದೌರ್ಜನ್ಯಗಳು ಹಾಗೂ ಅಪರಾಧಗಳು ಹೆಚ್ಚಾಗುತ್ತಿವೆ. ಹೆಣ್ಣು ಹುಟ್ಟಿನಿಂದ ಮಸಣದವರೆಗೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಂಸ್ಕೃತಿಕ ಅಧಃಪತನದಿಂದ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಇವೆಲ್ಲದರ ಪರಿಣಾಮವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅಪರಾಧಗಳು ಹೆಚ್ಚುತ್ತಿವೆ. ಇಂದು ಎಲ್ಲಾ ಕ್ಷೇತ್ರದ ಹೆಣ್ಣು ಮಕ್ಕಳು ಸಂಘಟಿತರಾಗಬೇಕು, ಶೋಷಣೆ ರಹಿತ ಸಮಾಜ ಕಟ್ಟುವ ಗುರಿಯೊಂದಿಗೆ ಪುರುಷರೊಂದಿಗೆ ಸಮಸಮವಾಗಿ ಮುನ್ನಡೆಯಬೇಕು. ಸಮಾಜದ ಎಲ್ಲಾ ಮಹಿಳೆಯರು ಪ್ರಜಾತಾಂತ್ರಿಕ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಾ ಮಹಿಳೆ ಅಬಲೆಯಲ್ಲ ಸಬಲೆ ಎಂದು ರುಜುವಾತು ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು. ಶೋಷಣೆ ಅನ್ಯಾಯದ ವಿರುದ್ದ ಧ್ವನಿ ಎತ್ತುವ ಮಹಿಳಾ ಹೋರಾಟ ಪುರುಷ ವಿರೋಧಿ ಹೋರಾಟ ಅಲ್ಲ. ಸಮಾಜದ ಬದಲಾವಣೆಯ ಹೋರಾಟವಾಗಿದೆ ಈ ನಿಟ್ಟಿನಲ್ಲಿ ನಾವೆಲ್ಲ ಮುನ್ನಡೆಯಬೇಕು ಎಂದು ಭಾಗವಹಿಸಿದ್ದ ಎಲ್ಲಾ ಪ್ರತಿನಿಧಿಗಳಿಗೆ ಕರೆ ನೀಡಿದರು.
ಎಸ್‌ಯುಸಿಐ (ಸಿ) ಪಕ್ಷದ ರಾಜ್ಯ ಸೆಕ್ರೆಟರಿಯೆಟ್ ಸದಸ್ಯರಾದ ಡಾ.ಸುನೀತ್ ಕುಮಾರ್ ಟಿ ಎಸ್ ರವರು ಮಾತನಾಡಿ ನಮ್ಮ ಸಮಾಜದಲ್ಲಿ ಪುರುಷ ಪ್ರಧಾನ ಮನೋವಭಾವ ಜೀವಂತವಾಗಿರುವುದರಿಂದ ಹೆಜ್ಜೆ ಹೆಜ್ಜೆಗೂ ಮಹಿಳೆಯರು ದ್ವಿತೀಯ ದರ್ಜೆಯ ಪ್ರಜೆಯಾಗಿ ಪರಿಗಣಿಸ್ಪಲಡುತ್ತಿದ್ದಾರೆ. ಈ ಪುರುಷ ಪ್ರಧಾನ ಮನೋಭಾವ ಜೀವಂತ ಇರುವವರೆಗೂ ಹೆಣ್ಣು ಮಕ್ಕಳಿಗೆ ಸಮಾನತೆ ಎನ್ನುವುದು ಕನಸಿನ ಮಾತು. ಹಾಗಾಗಿ ಇದನ್ನು ತೊಡೆದು ಹಾಕುವಲ್ಲಿ ವೈಚಾರಿಕ, ಸಾಂಸ್ಕೃತಿಕ ಹೋರಾಟ ಬೆಳೆಯಬೇಕು ಹಾಗೂ ಸಮಾನತೆಯ ಸಮಾಜ ಸ್ಥಾಪಿಸಲು ಎಐಎಮ್‌ಎಸ್‌ಎಸ್ ಸಜ್ಜಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಬಾಳಮ್ಮ ಕೊಂಡಗೂಳಿ ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಸಮ್ಮೇಳನದಲ್ಲಿ ಚುನಾಯಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಗೀತಾ ಹೆಚ್, ಕಾರ್ಯದಶಿಯಾಗಿ ಶಿವಬಾಳಮ್ಮ ಕೊಂಡಗೂಳಿ, ಜಂಟಿ ಕಾರ್ಯದರ್ಶಿಯಾಗಿ ಶಿವರಂಜನಿ ಎಸ್.ಬಿ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಬೀನಾ,ಮಹದೇವಿ, ಗಂಗಾ ಜಾಲವಾದ, ಸ್ಮಿತಾ, ಗೀತಾ ಹಿರೇಮಠ, ಸಾನಿಯಾ, ವಿದ್ಯಾ, ಯಶೋಧ, ಚಂದ್ರವ್ವ, ಕಾವೇರಿ ಹಾಗೂ ಅಕ್ಷತಾ ಹಟ್ಟಿ, ಸವಿತಾ ತೆಗ್ಗಿ,ಶಂಕರಮ್ಮ ದೇಸಾಯಿ, ಸುಷ್ಮಾ ಹಾಗೂ 20 ಕೌನ್ಸಿಲ್ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಸಮ್ಮೇಳನದಲ್ಲಿ ಉದ್ಯೋಗಸ್ಥ ಮಹಿಳೆಯರು ಗೃಹಿಣಿಯರು, ಕಾರ್ಮಿಕ ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರು ಭಾಗವಹಿಸಿದ್ದರು.
ಎಐಎಮ್‌ಎಸ್‌ಎಸ್ ನೇತೃತ್ವದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳನದಲ್ಲಿ ಹಲವು ಬೇಡಿಕೆಗಳಿರುವ ಗೊತ್ತುವಳಿಗಳನ್ನು ಮಂಡಿಸಲಾಯಿತು.
ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಿ, ಮರ್ಯಾದೆ ಹತ್ಯೆ, ಬಾಲ್ಯವಿವಾಹ, ಸ್ರ್ತೀ ಭ್ರೂಣಹತ್ಯೆ ನಿಲ್ಲಲಿ ಮತ್ತು ಮಹಿಳೆಯರಿಗೆ ಶಿಕ್ಷಣ, ಉದ್ಯೋಗ. ಆರೋಗ್ಯ ಹಾಗೂ ಭದ್ರತೆಯನ್ನು ಖಾತ್ರಿಪಡಿಸಿ ಎಂಬ ಹಕ್ಕೋತ್ತಾಯಗಳನ್ನು ಪ್ರಮುಖವಾಗಿ ಈ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು.