ಬ್ಲಗೋವೆಶೆನ್ಸ್ಕ , ನ 19 : ರಷ್ಯಾದ ಬ್ಲಗೋವೆಶೆನ್ಸ್ಕ ಶಾಲೆಯೊಂದರಲ್ಲಿ ಕಳೆದ ವಾರ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಅಲ್ಲಿನ ನ್ಯಾಯಾಲಯ, ವಿದ್ಯಾಥರ್ಿಗಳಿಗೆ ಶಸ್ತ್ರಾಸ್ತ್ರ ಕೊಂಡೊಯ್ಯಲು ಅವಕಾಶ ನೀಡಿದ ಭದ್ರತಾ ಸಿಬ್ಬಂದಿಯನ್ನು ಬಂಧಿಸುವಂತೆ ಸೂಚನೆ ನೀಡಿದೆ. ಭದ್ರತಾ ಸಿಬ್ಬಂದಿ ಒಲೇಗ್ ಎರ್ಮೊಲೋವ್ ಅನ್ನು 2020ರ ಜನವರಿ 14ರವರೆಗೆ ಬಂಧನದಲ್ಲಿರಿಸಲು ನ್ಯಾಯಾಲಯ ಆದೇಶ ನೀಡಿದೆ. ನ. 14ರಂದು 19 ವರ್ಷದ ವಿದ್ಯಾರ್ಥಿ ಕಾಲೇಜಿನ ಆವರಣದೊಳಗೆ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ನಂತರ ವಿದ್ಯಾರ್ಥಿ ಸ್ವಯಂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದನು. ಪ್ರಾಥಮಿಕ ವರದಿ ಪ್ರಕಾರ, ವೈಯಕ್ತಿಕ ಕಲಹದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ತಾನು ತಪ್ಪಿತಸ್ಥನಲ್ಲ, ಅವಘಡ ತಪ್ಪಿಸಲು ನನ್ನಿಂದ ಏನು ಸಾಧ್ಯವೋ ಎಲ್ಲವರನ್ನೂ ಮಾಡಿದ್ದೇನೆ. ಶಾಲೆಯೊಳಗಿದ್ದ ಜನರನ್ನು ಹೊರಕರೆತಂದಿದ್ದೇನೆ. ತುರ್ತು ನೆರವಿಗೆ ಕರೆ ನೀಡಿದ್ದೇನೆ. ನಾನು ಶಾಲೆಯ ನಿಜವಾದ ಭದ್ರತಾ ಸಿಬ್ಬಂದಿಯಲ್ಲ, ನನ್ನ ಬಳಿ ಪ್ರಮಾಣಪತ್ರವೂ ಇಲ್ಲ ಎಂದು ಭದ್ರತಾ ಸಿಬ್ಬಂದಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾನೆ. ಈ ನಡುವೆ,ಘಟನೆಯಲ್ಲಿ ಗಾಯಗೊಂಡ ಮೂರು ವಿದ್ಯಾರ್ಥಿಗಳ ಪರಿಸ್ಥಿತಿ ಸುಧಾರಿಸುತ್ತಿದ್ದು, ಓರ್ವ ವಿದ್ಯಾರ್ಥಿ ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾನೆ. ಘಟನೆ ನಂತರ ಸ್ಥಗಿತಗೊಂಡಿದ್ದ ಶಾಲಾ ತರಗತಿಗಳು ಎಂದಿನಂತೆ ಪುನಾರಂಭಗೊಂಡಿವೆ.