ಕ್ಯಾರಕಾಸ್, ಜ 24 : ದಕ್ಷಿಣ ಅಮೇರಿಕದ ವೆನೆಜುವೆಲಾ ದೇಶದ ಉತ್ತರ ಭಾಗದಲ್ಲಿ ಕಬ್ಬಿನ ತೋಟದಲ್ಲಿ ಬೆಂಕಿ ಅನಾಹುತ ಉಂಟಾಗಿ ಕನಿಷ್ಟ 12 ಜನರು ಸಾವನ್ನಪ್ಪಿದ್ದು, ಇತರ 13 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವೆನೆಜುವೆಲಾದ ಅರಾಗುವಾ ರಾಜ್ಯದಲ್ಲಿನ ಕಬ್ಬಿನ ತೋಟದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಪಿಟಾಜೊ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಸ್ಪತ್ರೆಗೆ ದಾಖಲಿಸಲಾದ ಗಾಯಾಳುಗಳ ಪೈಕಿ ಅನೇಕರ ಸ್ಥಿತಿ ಗಂಭೀರವಾಗಿದ್ದು, ಇವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳು ಧಾವಿಸಿ ಬೆಂಕಿ ನಂದಿಸಿದ್ದಾರೆ.
ಕಬ್ಬಿನ ತೋಟದಲ್ಲಿ ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕಬ್ಬಿನ ಬೆಳೆ ಒಣಗಿದ್ದರಿಂದ ಒಂದು ಕಿಡಿ ಬೆಂಕಿಯೇ ಇಡೀ ತೋಟಕ್ಕೆ ವ್ಯಾಪಿಸಲು ಕಾರಣವಾಗಿರಬಹುದು ಎಂದು ಅಧಿಕಾರಿಗಳು ಹೇಳಿರುವುದಾಗಿ ಪಿಟಾಜೋ ಸುದ್ದಿ ಸಂಸ್ಥೆ ವರದಿ ಮಾಡಿದೆ.