ನವದೆಹಲಿ, ಆ 24 ಭಾರತದ ಕ್ರಿಕೆಟಿಗ ಎಸ್. ಶ್ರೀಶಾಂತ್ ಅವರ ಕೊಚ್ಚಿಯಲ್ಲಿರುವ ಮನೆಗೆ ತಡರಾತ್ರಿ ಬೆಂಕಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ಗಾಯಗೊಂಡಿರುವ ಬಗ್ಗೆ ವರದಿ ದಾಖಲಾಗಿಲ್ಲ. ಕೊಚ್ಚಿಯ ಎಡಪಲ್ಲಿಯಲ್ಲಿರುವ ಶ್ರೀಶಾಂತ್ ಅವರ ಮನೆಯ ಕೆಳಗಿನ ಮಹಡಿಯ ಹಾಲ್ ಹಾಗೂ ಬೆಡ್ ರೂಂ ಗೆ ತಡರಾತ್ರಿ 2 ರ ಸಮಯದಲ್ಲಿ ಬೆಂಕಿ ಬಿದ್ದಿತ್ತು. ಆದರೆ, ಶ್ರೀಶಾಂತ್ ಅವರು ಮನೆಯಲ್ಲಿ ಇರಲಿಲ್ಲ. ಅವರ ಪತ್ನಿ ಹಾಗೂ ಮಕ್ಕಳು ಹಾಗೂ ಇಬ್ಬರು ಕೆಲಸದವರು ಮೊದಲನೇ ಮಹಡಿಯಲ್ಲಿ ಇದ್ದರು. ಶ್ರೀಶಾಂತ್ ಅವರ ಮನೆಯಿಂದ ಹೊಗೆ ಹೊರಗಡೆ ಬರುತ್ತಿದ್ದನ್ನು ಗಮನಿಸಿದ ನೆರೆಹೊರೆಯವರು ಗಾಂಧಿನಗರ ಮತ್ತು ತ್ರಿಕಕ್ಕಾರ ಅಗ್ನಶಾಮಕ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮನೆಯ ಗ್ಲಾಸ್ ಹೊಡೆದು ಒಳ ನುಗ್ಗಿ ಶ್ರೀಶಾಂತ್ ಅವರ ಕುಟುಂಬದ ಸದಸ್ಯರನ್ನು ರಕ್ಷಿಸಿದರು. ನಂತರ, ಬೆಂಕಿಯನ್ನು ಹಾರಿಸಿದರು.