ಬೆಂಗಳೂರು 21: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಿನಗೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಮುನಿರತ್ನ ಹಾಗೂ ಇತರ ಆರು ಜನ, ಕಟ್ಟಡ ನಿರ್ಮಾಣ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದು, ತಾತ್ಕಾಲಿಕ ಶೆಡ್‌ಗಳನ್ನು ಕೆಡವಿದ್ದಾರೆ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ 20 ವರ್ಷದ ದಿನಗೂಲಿ ಕಾರ್ಮಿಕ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು, ಶಾಸಕ ಮುನಿರತ್ನ, ವಸಂತಕುಮಾರ್, ಚೆನ್ನಕೇಶವ, ನವೀನ್, ಶ್ರೀರಾಮ, ಪೀಣ್ಯ ಕಿಟ್ಟಿ ಮತ್ತು ಪೀಣ್ಯ ಗಂಗಾ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಪೀಣ್ಯದ ಎಸ್‌ಆರ್‌ಎಸ್ ವೃತ್ತದ ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂನಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಶಾಸಕ ಮುನಿರತ್ನ ಮತ್ತು ಸಹಚರರು ಜೆಸಿಬಿ ತಂದು ಏಕಾಏಕಿ ಎಲ್ಲರ ಮನೆಯನ್ನು ನೆಲಸಮ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.