ಕರ್ನಾಟಕದ ಪರ ಗೊತ್ತುವಳಿ ಅಂಗೀಕರಿಸುವವರೆಗೆ ಹೋರಾಟ

ಕರ್ನಾಟಕದ ಪರ ಗೊತ್ತುವಳಿ ಅಂಗೀಕರಿಸುವವರೆಗೆ ಹೋರಾಟ Fight until the resolution in favor of Karnataka is passed

ಲೋಕದರ್ಶನ ವರದಿ 

ಬೆಳಗಾವಿ 16: ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲಿ ಕರ್ನಾಟಕದ ಪರ ಗೊತ್ತುವಳಿಯನ್ನು ಅಂಗೀಕರಿಸುವವರೆಗೆ ಹೋರಾಟವನ್ನು ಹಂತ ಹಂತವಾಗಿ ಮುಂದುವರೆಸಲು ಕನ್ನಡ ಪರ ಸಂಘಟನೆಗಳು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಿದ್ದು, ಮೇ 13 ರಂದು ನಡೆದ ಪಾಲಿಕೆಯ ಸಭೆಯಲ್ಲಿ ಕೈಕೊಂಡ ನಿರ್ಣಯವನ್ನು ಸಾರಾಸಗಟವಾಗಿ ತಿರಸ್ಕರಿಸಲು ಸಭೆ ತೀರ್ಮಾನಿಸಿತು.  

ಶನಿವಾರ ಮುಂಜಾನೆ ಬೆಳಗಾವಿಯ ಸರ್ಕಿಟ್ ಹೌಸನಲ್ಲಿ ನಡೆದ ಕನ್ನಡ ಸಂಘಟನೆಗಳ ಅಧ್ಯಕ್ಷರ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಕೊಳ್ಳಲಾಗಿದ್ದು, ಕರ್ನಾಟಕ ಪರ ಗೊತ್ತುವಳಿಯನ್ನು ಪಾಸು ಮಾಡುವುದಾಗಿ ಕನ್ನಡ ಸಂಘಟನೆಗಳಿಗೆ ನೀಡಿದ ಭರವಸೆಯ ವಿರುದ್ಧ ನಡೆದುಕೊಂಡ ಮಹಾಪೌರರು ಹಾಗೂ ಉಪಮಹಾಪೌರರು ಕನ್ನಡಿಗರ ಕಣ್ಣಿಗೆ ಮಣ್ಣೆರಚುವಂತ ನಿರ್ಣಯವನ್ನು ಕೈಕೊಳ್ಳುವ ಮೂಲಕ ಕರ್ನಾಟಕದ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆಂದು ಸಭೆಯು ಅಭಿಪ್ರಾಯಪಟ್ಟಿತು. 

ಕರ್ನಾಟಕ ಪರ ಗೊತ್ತುವಳಿ ಪಾಸು ಮಾಡವ ಬಗ್ಗೆ ಅಭಿಪ್ರಾಯ ಕೇಳಲು ನಗರಾಭಿವೃದ್ಧಿ ಕಾರ್ಯದರ್ಶಿಗೆ ಪತ್ರ ಬರೆಯುವ ನಿರ್ಣಯ ಕೈಕೊಂಡ ಪಾಲಿಕೆಯ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸರ್ವೋನ್ನತ ನ್ಯಾಯಾಲಯದ ಖ್ಯಾತ ನ್ಯಾಯವಾದಿ ಶ್ರೀ ಮೋಹನ ಕಾತರಕಿ ಅವರ ಅಭಿಪ್ರಾಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.  

ಕಳೆದ ಮಾರ್ಚ 26 ರಿಂದ ಹೋರಾಟ ನಡೆಸಿರುವ ಬೆಳಗಾವಿಯ ಸಮಾನ ಮನಸ್ಕ ಕನ್ನಡ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿಯ ರಾಜ್ಯಾಧ್ಯಕ್ಷ ಶ್ರೀ ವಿಜಯೇಂದ್ರ ಅವರನ್ನು ಭೆಟ್ಟಿಯಾಗಿ ಬೆಳಗಾವಿ ಪಾಲಿಕೆಯ ಬಗ್ಗೆ ಚರ್ಚಿಸಿ, ಭರವಸೆ ಪಡೆದ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ರಾಜ್ಯಾಧ್ಯಕ್ಷ ಎಲ್‌. ಶಿವರಾಮೇಗೌಡ ಹಾಗೂ ಬೆಂಗಳೂರಿನ ಕನ್ನಡ ನಾಡು, ನುಡಿ ಜಾಗೃತಿ ಸಮಿತಿಯ, ನಾಡಿನ ಹಿರಿಯ ಸಾಹಿತಿಗಳಾದ ಡಾ. ಮರುಳಸಿದ್ಧಪ್ಪ, ಡಾ. ಜಿ. ರಾಮಕೃಷ್ಣ, ಪ್ರೊ. ಎಸ್‌.ಜಿ.ಸಿದ್ಧರಾಮಯ್ಯ, ಡಾ. ವಿಜಯಾ, ಜಾಣಗೆರೆ ವೆಂಕಟರಾಮಯ್ಯ, ಡಾ. ಬಂಜಗೆರೆ ಜಯಪ್ರಕಾಶ, ಆರ್‌.ಜಿ.ಹಳ್ಳಿ ನಾಗರಾಜ ಹಾಗೂ ಡಾ.ವಸುಂಧರಾ ಭೂಪತಿ ಅವರುಗಳಿಗೆ ಇಂದಿನ ಸಭೆಯಲ್ಲಿ ಧನ್ಯವಾದ ತಿಳಿಸಲಾಯಿತು. 

ಕರ್ನಾಟಕ ಪರ ಗೊತ್ತುವಳಿಯನ್ನು ಪಾಸು ಮಾಡುವಲ್ಲಿ ವಿಳಂಬ ತಂತ್ರ ಅನುಸರಿಸಿದಲ್ಲಿ ಮಹಾಪೌರರು ಹಾಗೂ ಉಪಮಹಾಪೌರರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಹಾಗೂ ಗಡಿ ವಿವಾದ ಬಗ್ಗೆ ಖಚಿತವಾದ ನಿಲವು ತಿಳಿಸಲು ಆಗ್ರಹಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.  

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪುನರ್ ಸ್ಥಾಪನೆಗೊಂಡ ಹಲ್ಮಿಡಿ ಶಾಸನದ ಪ್ರತಿಕೃತಿಯ ಪೂಜಾ ಸಮಾರಂಭವನ್ನು ಮುಂದಿನ ವಾರ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತಲ್ಲದೇ ಈ ಕಾರ್ಯಕ್ರಮಕ್ಕೆ ಹಿರಿಯ ಕನ್ನಡ ಹೋರಾಟಗಾರರಾದ ವಾಟಾಳ ನಾಗರಾಜ ಹಾಗೂ ಎಲ್‌. ಶಿವರಾಮೇಗೌಡ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.  

ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜೀದ ಹಿರೇಕೊಡಿ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕ್ರಿಯಾ ಸಮಿತಿಯ ಹಿರಿಯ ಉಪಾಧ್ಯಕ್ಷ ಮೈನೋದ್ದಿನ ಮಕಾನಾದಾರ, ಆನಂದ ಬಿಲಾವರ ಮುಂತಾದವರು ಭಾಗವಹಿಸಿದ್ದರು.