ಬೆಂಗಳೂರು, ಫೆ 5 : ಇಡೀ ದೇಶದಲ್ಲಿಯೇ ಉತ್ತಮ ಆರ್ಥಿಕ ನೀತಿ ಹೊಂದಿರುವ ಕರ್ನಾಟಕಕ್ಕೆ ಎನ್.ಡಿ.ಎ ಸರ್ಕಾರದಿಂದಾಗಿ ಆರ್ಥಿಕ ಕೊರತೆ ತೀವ್ರವಾಗಿ ಬಾಧಿಸಲಿದ್ದು, ರಾಜ್ಯದ ಅನುದಾನಕ್ಕೆ ಭಾರೀ ಪ್ರಮಾಣದಲ್ಲಿ ಕತ್ತರಿ ಬೀಳಲಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಯಡಿಯೂರಪ್ಪ ಅವಧಿಯಲ್ಲಿ ಮಾತ್ರ ಆರ್ಥಿಕ ಕುಸಿತ ಕಂಡಿತ್ತು. ಯಡಿಯೂರಪ್ಪ ಹಿಂದೆಯೂ ಆರ್ಥಿಕ ಶಿಸ್ತು ಮುರಿದಿದ್ದರು. ಧರಂ ಸಿಂಗ್ ಅವಧಿಯಿಂದ ಆರ್ಥಿಕ ನೀತಿ ಉತ್ತಮವಾಗಿತ್ತು ಎಂದರು.
ಕೇಂದ್ರದಿಂದ ಬರುವ ಅನುದಾನದಲ್ಲಿ ಕಡಿತವಾಗಲಿದ್ದು, ರಾಜ್ಯ ಆರ್ಥಿಕವಾಗಿ ಸುಭಿಕ್ಷವಾಗಿದ್ದು, ನಿಮಗೆ ಅನುದಾನ ಏಕೆ? ಎನ್ನುವುದು ಕೇಂದ್ರದ ಧೋರಣೆಯಾಗಿದೆ. ಜಿಎಸ್ ಟಿ ಸಂಗ್ರಹದಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದ್ದು, ಬೇರೆ ಯಾವ ರಾಜ್ಯಗಳು ಕರ್ನಾಟಕದಷ್ಟು ಸರಕು ಮತ್ತು ಸೇವಾ ತೆರಿಗೆ ಸಂಗ್ರಹಿಸುತ್ತಿಲ್ಲ. ಇಷ್ಟಾದರೂ ರಾಜ್ಯಕ್ಕೆ ಬರಬೇಕಿರುವ ಜಿಎಸ್ಟಿಯ 7500 ಕೋಟಿ ರೂ ಪಾಲು ಬಂದಿಲ್ಲ. ಕೇಂದ್ರದ ಅನುದಾನ ಕೊರತೆ ಸೇರಿ ರಾಜ್ಯಕ್ಕೆ ಮತ್ತಷ್ಟು ಹೊಡೆತಬೀಳಲಿದೆ ಎಂದರು.
15ನೇ ಹಣಕಾಸು ಆಯೋಗ ಆರ್ಥಿಕ ಪರಿಸ್ಥಿತಿ ಕುರಿತ ವರದಿ ಸಲ್ಲಿಸಿದೆ.ಈ ವರದಿ ನೋಡಿದರೆ ಸಾಕಷ್ಟು ಆತಂಕವಾಗುತ್ತಿದೆ.
70ವರ್ಷಗಳ ಇತಿಹಾಸದಲ್ಲಿ ಮೊದಲ ಕಳವಳದ ವರದಿ ಇದಾಗಿದ್ದು, ವರದಿಯನ್ನು ಗಮನಿಸಿದರೆ ಆರ್ಥಿಕ ಹೊಡೆತದಿಂದ ದೂರವಾಗಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ವರದಿಯನ್ವಯ ರಾಜ್ಯ ಒಂದು ಲಕ್ಷ ಕೋಟಿ ರೂ ಕಳೆದುಕೊಳ್ಳಬೇಕಾಗುತ್ತದೆ. ದಕ್ಷಿಣದ ರಾಜ್ಯಗಳಿಗೆ ಇದರಿಂದ ಹೆಚ್ಚಿನ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಎಸ್ ಟಿಯಿಂದ ಸಂಗ್ರಹಿಸಿದ ಸಂಪನ್ಮೂಲದಲ್ಲಿ ಹೆಚ್ಚಿನ ಪಾಲು ಉತ್ತರಪ್ರದೇಶಕ್ಕೆ ಹೋಗುತ್ತಿದೆ. ಯುಪಿಗೆ ಶೇ. 17.36 ರಷ್ಟು, ಗುಜರಾತ್ ಗೆ ಶೇ 3.39 ರಷ್ಟು ಪಾಲು ದೊರೆಯುತ್ತಿದೆ. ಕರ್ನಾಟಕಕ್ಕೆ ಶೇ 3.07ರಷ್ಟು ಮಾತ್ರ ಸಿಗುತ್ತಿದೆ. ಆದರೆ ಜಿಎಸ್ ಟಿ ಹೆಚ್ಚಿನ ತೆರಿಗೆ ರಾಜ್ಯದಿಂದ ಹೋಗುತ್ತಿದೆ. ಆದರೆ ಕೇಂದ್ರದಿಂದ ಸಿಗುವುದು ಅತ್ಯಲ್ಪ ಮಾತ್ರ ಎಂದು ಕೇಂದ್ರದ ನೀತಿಗೆ ರಾಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.