ಧಾರವಾಡ 12: ಸರ್ಕಾರಿ ಕನ್ನಡ ಶಾಲೆಗಳನ್ನು 1ನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಶಾಲೆಗಳಾಗಿ ಪರಿವರ್ತಿಸಬೇಕೆನ್ನುವುದು ಕರ್ನಾಟಕ ಸರ್ಕಾರದ ತಪ್ಪು ನಿಲುವನ್ನು ಖಂಡಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಸದಸ್ಯರು ಸಾಂಕೇತಿಕ ಧರಣಿ ಸತ್ಯಾಗ್ರಹ ಮಾಡಿ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಮನವಿಯಲ್ಲಿ ಸರಕಾರಿ ಕನ್ನಡ ಶಾಲೆಗಳು ಕರ್ನಾಟಕದ ಸಂಸ್ಕೃತಿಯ ಗಟ್ಟಿಬೇರುಗಳು. ಕನ್ನಡ ನಾಡಿನ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಕನ್ನಡ ಶಾಲೆಗಳು ಅಪರೂಪದ ಕೊಡುಗೆಯನ್ನು ನೀಡಿವೆ. ಕರ್ನಾಟಕದ ಹೆಸರಾಂತ ದಿಗ್ಗಜರು ಕನ್ನಡ ಶಾಲೆಗಳಲ್ಲಿ ಓದಿ ಪ್ರಸಿದ್ಧಿಗೆ ಬಂದವರು ಆಗಿರುತ್ತಾರೆ. ಕನ್ನಡ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಪ್ರಕಾರ ಇಡೀ ರಾಷ್ಟ್ರದಲ್ಲಿ ಇರುವಂತೆ, ಕನ್ನಡ ಭಾಷೆಯಲ್ಲಿ ಮಕ್ಕಳಿಗೆ ಬೋಧನೆ ಮಾಡಿ, ಜ್ಞಾನ ಮತ್ತು ತಿಳುವಳಿಕೆಯನ್ನು ಮನಮುಟ್ಟುವಂತೆ ಸರ್ಕಾರಿ ಕನ್ನಡ ಶಾಲೆಗಳು ಮಾಡುತ್ತಾ ಬಂದಿವೆ. 1 ರಿಂದ 4 ನೇ ತರಗತಿವರೆಗೆ ಎಲ್ಲ ವಿಷಯಗಳನ್ನು ಸಕರ್ಾರಿ ಕನ್ನಡ ಶಾಲೆಗಳಲ್ಲಿ, ಕನ್ನಡ ಮಾಧ್ಯಮದಲ್ಲಿ ಕಲಿಸಿ, ಮಕ್ಕಳನ್ನು ಜ್ಞಾನವಂತರು ಮತ್ತು ಪರಿಪೂರ್ಣ ವ್ಯಕ್ತಿತ್ವ ಹೊಂದುವಂತೆ ಮಾಡುತ್ತಾ ಬಂದಿರುವುದು ಸರ್ಕಾರಿ ಕನ್ನಡ ಶಾಲೆಗಳ ಶಕ್ತಿಯನ್ನು ಸಾರಿ ಹೇಳುತ್ತವೆ. ಇಂತಹ ಅಮೋಘ ಸೇವೆ ಸಲ್ಲಿಸುತ್ತಾ ಮತ್ತು ಪರಿಣಾಮಕಾರಿ ಕಾರ್ಯ ಮಾಡುತ್ತಾ ಬಂದಿರುವ ಸರ್ಕಾರಿ ಕನ್ನಡ ಶಾಲೆಗಳನ್ನು 1 ನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಶಾಲೆಗಳಾಗಿ ಪರಿವರ್ತಿಸಬೇಕೆನ್ನುವುದು ಕರ್ನಾಟಕ ಸರ್ಕಾರದ ತಪ್ಪು ನಿಲುವಾಗಿದೆ. ಈ ನಿಲುವು ಶಿಕ್ಷಣ ತಜ್ಞರ ಮತ್ತು ಸಾಮಾಜಿಕ ಚಿಂತಕರ ದೃಷ್ಟಿಯಲ್ಲಿ ಸಂಪೂರ್ಣ ಅವೈಜ್ಞಾನಿಕ ನಿಲುವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದು ಸಂಪೂರ್ಣ ಜನವಿರೋಧಿ ನಿಲುವಾಗಿದೆ.
ಕರ್ನಾಟಕ ಸರಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಕನ್ನಡ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಿ, ಆದೇಶ ಹೊರಡಿಸಿ, ಕಾರ್ಯಾಚರಣೆಗೆ ಇಳಿದಿರುವ ಕರ್ನಾಟಕ ಸರಕಾರದ ನಿಲುವು ಮತ್ತು ನಡೆಯನ್ನು ಸಂಘವು ಸಂಪೂರ್ಣವಾಗಿ ವಿರೋಧಿಸುತ್ತದೆ ಮತ್ತು ತೀವ್ರವಾಗಿ ಖಂಡಿಸುತ್ತದೆ.
ಕರ್ನಾಟಕ ಸರಕಾರದ ಈ ನಿಲುವು ಮತ್ತು ಧೋರಣೆ ಜನವಿರೋಧಿ, ಶಿಕ್ಷಣ ವಿರೋಧಿ ಮತ್ತು ಮಕ್ಕಳ ವಿರೋಧಿ ಧೋರಣೆಯಾಗಿದ್ದು, ಕನ್ನಡ ಭಾಷೆ ಉಳಿವು ಮತ್ತು ಬೆಳವಣಿಗೆಗೂ ಕೂಡಾ ಮಾರಕವಾಗಿದ್ದರಿಂದ, ಈ ನಿಲುವನ್ನು ಕೈ ಬಿಡಬೇಕೆಂದು ಸಂಘವು ಒತ್ತಾಯಿಸುತ್ತದೆ. ಈ ನಿಲುವು ರಾಜ್ಯದ ಹಿತಾಸಕ್ತಿಗೂ ಕೂಡಾ ಮಾರಕವಾಗಿದೆ.
ಆದ್ದರಿಂದ, ಈ ಆದೇಶವನ್ನು ಕರ್ನಾಟಕ ಸರಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು. ಒಂದು ವೇಳೆ ಹಿಂಪಡೆಯದಿದ್ದರೆ, ಕರ್ನಾಟಕ ವಿದ್ಯಾವರ್ಧಕ ಸಂಘವು ಉಗ್ರ ಹೋರಾಟ ಮಾಡಬೇಕಾಗುವುದು ಎಂದು ಕರ್ನಾಟಕ ಸರಕಾರಕ್ಕೆ ಈ ಕುರಿತು ಸಂಘ ಎಚ್ಚರಿಕೆ ನೀಡಿತ್ತು, ಆದರೆ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ.
ಈಗ ಉಗ್ರವಾದ ಹೋರಾಟಕ್ಕೆ ಇಳಿಯಲು ಮುಂದಿನ ಹೋರಾಟದ ರೂಪರೇಷೆಗಳ ಕುರಿತು ಚರ್ಚಿಸಲು ಕರ್ನಾಟಕ ವಿದ್ಯಾವರ್ಧಕ ಸಂಘವು ದಿನಾಂಕ 6-7-2019 ರಂದು ಶನಿವಾರ ಸಂಜೆ 5 ಗಂಟೆಗೆ ಕನರ್ಾಟಕ ವಿದ್ಯಾವರ್ಧಕ ಸಂಘದಲ್ಲಿ ಜನಪ್ರತಿನಿಧಿಗಳ, ಸಾಹಿತಿಗಳ, ಚಿಂತಕರ, ಕನ್ನಡಪರ ಹೋರಾಟಗಾರರ, ಸಂಘಟನೆಗಳ, ವಿದ್ಯಾರ್ಥಿ , ಯುವಜನ, ಪಾಲಕರ ಮತ್ತು ಸಾರ್ವಜನಿಕರ ಸಭೆಯನ್ನು ಕರೆದ ಈ ಸಭೆಯಲ್ಲಿ ತೀರ್ಮಾನಿಸಿದಂತೆ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿ ಎದುರಿನಲ್ಲಿ ಮುಂಜಾನೆ 11 ಗಂಟೆಗೆ ಸಂಘದ ನೇತೃತ್ವದಲ್ಲಿ `ಸಾಂಕೇತಿಕ ಧರಣಿ ಸತ್ಯಾಗ್ರಹ' ಮೂಲಕ ಈ ಆದೇಶ ಹಿಂಪಡೆಯಲು ಸರಕಾರವನ್ನು ಒತ್ತಾಯಿಸುತ್ತದೆ. ಅದೇ ರೀತಿ ಈಗಾಗಲೇ ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ ಮಾಡಿದ ಒಂದು ಸಾವಿರ ಶಾಲೆಗಳನ್ನು ಪುನಃ ಕನ್ನಡ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಬೇಕು
ಒಂದು ವೇಳೆ ಸದರಿ ಆದೇಶವನ್ನು ಹಿಂಪಡೆಯದಿದ್ದರೆ, ಇನ್ನೂ ಉಗ್ರವಾದ ಹೋರಾಟವನ್ನು ಕೈಕೊಳ್ಳುವುದು ಎಂದು ಸಂಘವು ಸರಕಾರಕ್ಕೆ ಎಚ್ಚರಿಕೆ ನೀಡಿದೆ.