ಗದಗ 18: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಗ್ರಾಮ ಸಂಪರ್ಕ ಯೋಜನೆಯಡಿಯಲ್ಲಿ ತಾಲ್ಲೂಕು ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕ್ಷೇತ್ರ ಪ್ರಚಾರ ಕಾರ್ಯಕ್ರಮವನ್ನು ವಾದ್ಯ ಭಾರಿಸುವುದರ ಮೂಲಕ ಗ್ರಾಮದ ಹಿರಿಯರಾದ ರಾಯಣ್ಣಗೌಡ್ರ ಪಾಟೀಲ್ ಚಾಲನೆ ನೀಡಿದರು.
ಗ್ರಾಮದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಡವರ ಶ್ರೇಯೋಭಿವೃದ್ಧಿಗಾಗಿ, ರೈತರ ಏಳ್ಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಜನಪರ ಯೋಜನೆಗಳು ಜಾರಿಯಲ್ಲಿದ್ದು, ಯೋಜನೆಗಳ ಕುರಿತು ಮಾಹಿತಿ ಪಡೆದುಕೊಂಡು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ, ಲಿಂಗ ತಾರತಮ್ಯ ಮಾಡದೇ, ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಜಾನಪದ ಗೀತೆ, ಗೀಗಿ ಪದ ಹಾಗೂ ಬೀದಿ ನಾಟಕ ಪ್ರದಶರ್ಿಸುವ ಮೂಲಕ ಸಿದ್ಧಲಿಂಗೇಶ್ವರ ಜಾನಪದ ಕಲಾ ತಂಡ ಅಡವಿಸೋಮಾಪುರ ಮತ್ತು ಗುರುಶಿಷ್ಯ ಕಲಾ ತಂಡ ಲಕ್ಕುಂಡಿಯ ಕಲಾವಿದರು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಚಂದ್ರು ಪಶುಪತಿಹಾಳ, ಆಶಾ ಕಾರ್ಯಕರ್ತೆ ವನುಜಾ ಡಂಬಳ, ಹನಮಂತಪ್ಪ ಬಾರಕೇರ, ಭೀಮಣ್ಣ ತಳವಾರ ಸೇರಿದಂತೆ ಗ್ರಾಮಸ್ಥರು ಇದ್ದರು