ಹೃದಯ ಕಾಯಿಲೆ ಕಾರಣಕ್ಕೆ ಮಗಳಿಗೆ ವಿಷ ಉಣಿಸಿ ಸಾಯಿಸಿದ್ದ ತಂದೆಗೆ ಜೀವಾವಧಿ ಶಿಕ್ಷೆ

ಹೃದಯ ಕಾಯಿಲೆ ಕಾರಣಕ್ಕೆ ಮಗಳಿಗೆ ವಿಷ ಉಣಿಸಿ ಸಾಯಿಸಿದ್ದ ತಂದೆಗೆ ಜೀವಾವಧಿ ಶಿಕ್ಷೆ Father sentenced to life for poisoning daughter

ಕಾರವಾರ  11: ಹೃದಯ ಕಾಯಿಲೆ ಕಾರಣಕ್ಕೆ ವಿಷ ಉಣಿಸಿ ಹನ್ನೊಂದು ವರ್ಷದ ಮಗಳನ್ನು  ಸಾಯಿಸಿದ್ದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ, ಶಿರಸಿ  ಅಧಿಕ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀಪು ನೀಡಿದೆ. ಯಲ್ಲಾಪುರ ತಾಲೂಕಿನ ಹೆಮ್ಮಡಿ ಕುಂಬ್ರಿ ನಿವಾಸಿ ನಾಗರಾಜ್ ನಾರಾಯಣ ಪೂಜಾರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ತನಗೆ ಹೆಣ್ಣು ಮಕ್ಕಳು ಜನಿಸಿವೆ, ವಂಶ ಉದ್ದಾರ ಸಾಧ್ಯವಿಲ್ಲ ಹಾಗೂ ಇರುವ ಮಗಳಿಗೆ ಹೃದಯದ ಕಾಯಿಲೆ ಇದೆ ಎಂದು , ಹಣವೆಲ್ಲಾ ಮಗಳ ಕಾಯಿಲೆಗೆ ಖರ್ಚಾಗುತ್ತದೆ ಎಂದು ಹನ್ನೊಂದು ವರ್ಷದ ನಯನಾ ಎಂಬ ಮಗಳಿಗೆ ಮನೆಯಲ್ಲಿದ್ದ ವಿಷವನ್ನು ಕುಡಿಯಲು ನೀಡಿ ಸಾಯಿಸಿದ್ದ ಘಟನೆ 9/1/2019 ರಲ್ಲಿ ನಡೆದಿತ್ತು. ಕುಂದರಗಿ ಪಂಚಾಯತ ವ್ಯಾಪ್ತಿಯ ಕುಂಬ್ರಿಯಲ್ಲಿ ನಡೆದ ಘಟನೆ ಸಾಕ್ಷಾಧಾರ ಸಹಿತ ಸಾಬೀತಾಗಿತ್ತು.

ಜೀವಾವಧಿ ಶಿಕ್ಷೆಗೆ ಗುರಿಯಾದ ನಾಗರಾಜ ಪೂಜಾರಿ  ಮಂಗಲಾ ಅವರನ್ನು  2006 ರಲ್ಲಿ ಮದುವೆಯಾಗಿದ್ದ. ಕುಡಿತ ಚಟದಿಂದ ಆಗಾಗ ಜಗಳವಾಗುತ್ತಿತ್ತು. ಪತ್ನಿ ಎರಡು ಹೆಣ್ಣು ಮಕ್ಕಳು ಹೆತ್ತ ಕಾರಣಕ್ಕೆ ನಿತ್ಯ ಜಗಳವಾಗಿ ಕಾರವಾರದ ಕರುಣಾ ಸಾಂತ್ವಾನ ಕೇಂದ್ರಕ್ಕೆ ವಿಷಯ ಮುಟ್ಟಿ ಅಲ್ಲಿ ಸಂಧಾನ ಕ್ರಿಯೆ ನಡೆದಿತ್ತು. ನಯನಾ ಮತ್ತು ಸಹನಾ ತಂದೆಯ ಜೊತೆಗೆ ಕುಂಬ್ರಿ ಮನೆಗೆ ಬಂದಿದ್ದರು. ಪತ್ನಿ ಕಾರವಾರದ ಸಾಂತ್ವಾನ ಕೇಂದ್ರದಲ್ಲಿದ್ದರು. ಆಗ ಮನೆಯಲ್ಲಿ ಇದ್ದ ಮಕ್ಕಳಲ್ಲಿ ಹಿರಿಯ ಮಗಳು ನಯನಾಗೆ ಹೃದಯ ಕಾಯಿಲೆ ಚಿಕಿತ್ಸೆ ನಾರಾಯಣ ಹೃದಯಾಲಯದಲ್ಲಿ ನಡೆದಿತ್ತು.  ಹಣವೆಲ್ಲಾ ಕಾಯಿಲೆ ವೆಚ್ಚಕ್ಕೆ ಖರ್ಚು ಎಂದು ಭಾವಿಸಿ ,ನಯನಾ ಎಂಬ ತನ್ನ ಮಗಳಿಗೆ ತಂದೆ ವಿಷ ನೀಡಿದ್ದ. ನಯನಾ ಸಾವಿನ ನಂತರ ಪ್ರಕರಣ ಹೊರಗೆ ಬಂದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಾದ ಆಲಿಸಿದ್ದ ಕೋರ್ಟ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎನ್‌.ಪೂಜಾರಿಗೆ ಜೀವಾವಧಿ ಶಿಕ್ಷೆ ಹಾಗೂ 17000 ದಂಡ ವಿಧಿಸಿದೆ. ನಯನಾಳ ತಂಗಿ ಸಹನಾಗೆ  10000 ಪರಿಹಾರ ನೀಡಲು ಹೆಚ್ಚುವರಿ  ಜಿಲ್ಲಾ ನ್ಯಾಯಾಲಯ ಶಿರಸಿ  ನ್ಯಾಯಾಧೀಶರಾದ ಕಿರಣ್ ಕಿಣಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಳಗೀಕರ ಸಮರ್ಥವಾದ ಮಂಡಿಸಿದ್ದರು.