ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ

ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ  Farmers stage massive protest demanding completion of work

ತಾಳಿಕೋಟಿ 16: ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಎಫ್‌ಐಸಿ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತರು ಕಳೆದ ಐದು ದಿನಗಳಿಂದ ನಡೆಸುತ್ತಿರುವ ಹೋರಾಟದ ಅಂಗವಾಗಿ 38 ಗ್ರಾಮಗಳ ರೈತರು ಸಾಂಕೇತಿಕ ಕತ್ತೆ ಚಳುವಳಿ ಮೂಲಕ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.  

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ರೈತ ಮುಖಂಡ ಪ್ರಭುಗೌಡ ಬಿರಾದಾರ ಅಸ್ಕಿ ಹಾಗೂ ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ 38 ಗ್ರಾಮಗಳ ರೈತರು ಜಮಾವಣೆಗೊಂಡು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಬೃಹತ್ ಮೆರವಣಿಗೆ ಪ್ರಾರಂಭಿಸಿದರು. ಮೆರವಣಿಗೆಯು ಪಟ್ಟಣದ ಶ್ರೀ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿ ಪ್ರತಿಭಟನಾಕಾರರು ಕೆಲ ಹೊತ್ತು ಸಾಂಕೇತಿಕ ರಸ್ತೆ ತಡೆ ನಡೆಸಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿಗಳ ನಿರ್ಲಕ್ಷೆ ಧೋರಣೆ ಖಂಡಿಸಿ ಧಿಕ್ಕಾರ ಕೂಗಿದರು.  

ಈ ಸಂದರ್ಭದಲ್ಲಿ ಪ್ರಗತಿಪರ ರೈತ ಪ್ರಭುಗೌಡ ಬಿರಾದಾರ ಅಸ್ಕಿ ಮಾತನಾಡಿ ರೈತ ವಿರೋಧಿ ರಾಜ್ಯ ಸರ್ಕಾರದಿಂದ ನಮಗೆ ನ್ಯಾಯ ಸಿಗುತ್ತಿಲ್ಲ ಕಳೆದ ಐದು ದಿನಗಳಿಂದ ಧರಣಿ ಕುಳಿತರೂ ಯಾವೊಬ್ಬ ಸರ್ಕಾರದ ಪ್ರತಿನಿಧಿಯು ಬಂದು ಮಾತನಾಡಿಸಿಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಬಬಲೇಶ್ವರ ಮತಕ್ಷೇತ್ರದ ಉಸ್ತುವಾರಿಯಾಗಿದ್ದಾರೆ ಅವರ ಧೋರಣೆ ಖಂಡನೀಯವಾಗಿದೆ ನಾವು ಯಾವ ಕಾರಣಕ್ಕೂ ಜಗ್ಗುವುದಿಲ್ಲ ಬಗ್ಗುವುದಿಲ್ಲ ಈ ಹೋರಾಟ ಇನ್ನಷ್ಟು ಉಗ್ರ ಸ್ವರೂಪ ಪಡೆದುಕೊಳ್ಳುವ ಪೂರ್ವ ಸರ್ಕಾರ ಹಾಗೂ ಉಸ್ತುವಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದರು. ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ಬೂದಿಹಾಳ ಪೀರಾಪೂರ ಯೋಜನೆ ಶೇ.90 ರಷ್ಟು ಮುಗಿದಿದ್ದು ಇನ್ನು ಕೇವಲ ಶೇ.10 ರಷ್ಟು ಮಾತ್ರ ಉಳಿದಿದೆ ಇದಕ್ಕೆ ಕೇವಲ 200 ಕೋಟಿ ಮೊತ್ತದ ಅಗತ್ಯವಿದೆ ಇಷ್ಟು ಹಣ ಕೊಡುವಂತೆ ಅಂಗಲಾಚಿಸಿದರೂ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಇದೊಂದು ಹೃದಯಹೀನ ಸರ್ಕಾರ, ನಮ್ಮ ಹೋರಾಟದ 5 ನೇ ದಿನವಾದ ಇಂದಿನ ಕತ್ತೆ ಚಳುವಳಿಯನ್ನು ಶಾಂತ ಪೂರ್ಣವಾಗಿ ನಡೆಸುತ್ತಿವೆ ಎಂದು ಪೊಲೀಸ್ ಇಲಾಖೆಗೆ ತಿಳಿಸಿದರೂ ಚಳುವಳಿ ನಿಷ್ಕ್ರಿಯಗೊಳಿಸುವ ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದೆ ಇದನ್ನು ನಾವು ಹೈಕೋರ್ಟ್‌ ನಲ್ಲಿ ಪ್ರಶ್ನಿಸುತ್ತೇವೆ, ಬರುವ ದಿನಗಳಲ್ಲಿ ಇದಕ್ಕಿಂತಲೂ ಉಗ್ರವಾದ ಹೋರಾಟವನ್ನು ನಡೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಅಲ್ಲಿಂದ ಮತ್ತೆ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಬಸ್ ನಿಲ್ದಾಣದ ಮಾರ್ಗವಾಗಿ ತಹಸಿಲ್ದಾರ್ ಕಾರ್ಯಾಲಯದ ಆವರಣಕ್ಕೆ ತಲುಪಿ ತಹಸಿಲ್ದಾರ ಡಾ.ವಿನಯಾ ಹೂಗಾರ ಅವರ ಮೂಲಕ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  

ಈ ಸಮಯದಲ್ಲಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷ ರಾಮನಗೌಡ ಹಾದಿಮನಿ,ರೈತ ಮುಖಂಡರಾದ ಸುರೇಶಕುಮಾರ ಇಂಗಳಗೇರಿ,ಎಚ್‌.ಎನ್‌.ಬಿರಾದಾರ, ಶಿವಪುತ್ರ ಚೌದ್ರಿ, ಶಂಕರಗೌಡ ದೇಸಾಯಿ, ಡಾ.ಪ್ರಭುಗೌಡ ಅಸ್ಕಿ,ಜಿಪಂ ಮಾಜಿ ಸದಸ್ಯ ಸಾಹೇಬಗೌಡ ಆಲ್ಯಾಳ, ರಾಯನಗೌಡ ನೀರಲಗಿ, ಬಾಬು ಗೌಡ ಪಾಟೀಲ, ಭೀಮನಗೌಡ ನಾಗರೆಡ್ಡಿ,ಗುರುರಾಜ ಪಡಶಟ್ಟಿ, ನಿಂಗನಗೌಡ ಚೌದರಿ, ಅಶೋಕ ಉಪ್ಪಲದಿನ್ನಿ, ಬಾಬುಗೌಡ ಪಾಟೀಲ, ಮಲ್ಲನಗೌಡ ಬಿರಾದಾರ ಆನಂದಗೌಡ ಪಾಟೀಲ, ಗೋಪಾಲ ಕಟ್ಟಿಮನಿ, ಬಸ್ಸು ಮಾದರ ಹಾಗೂ ವಿವಿಧ ರೈತ ಹಾಗೂ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.  

ಬಿಗಿ ಪೊಲೀಸ್ ಬಂದೋಬಸ್ತ್‌: ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತಿ ಒದಗಿಸಲಾಗಿತ್ತು.