9 ತಾಸು ನಿರಂತರವಾಗಿ ವಿದ್ಯುತ್ ಪೂರೈಯಿಸುವಂತೆ ರೈತರ ಆಗ್ರಹ

9 ತಾಸು ನಿರಂತರವಾಗಿ ವಿದ್ಯುತ್ ಪೂರೈಯಿಸುವಂತೆ ರೈತರ ಆಗ್ರಹ Farmers demand continuous 9-hour power supply

ಲೋಕದರ್ಶನ ವರದಿ 

ಕಂಪ್ಲಿ 18 :  ಮಳೆ ಕೊರತೆಗೆ ಈಗಾಗಲೇ ರೈತರು ಬದುಕು ಅತಂತ್ರದಲ್ಲಿ ಸಾಗುವಂತಾಗಿದ್ದು, ಈಗ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ಕೂಡಲೇ ರೈತರ ಪಂಪ್‌ಸೆಟ್‌ಗಳಿಗೆ 6 ತಾಸಿನ ವಿದ್ಯುತ್ ಪೂರೈಕೆ ಜೊತೆಗೆ ಹೆಚ್ಚವರಿ ಮೂರು ತಾಸು ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಂಪ್ಲಿ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಪಟ್ಟಣದ ಜೆಸ್ಕಾಂ ಕಛೇರಿ ಆವರಣದಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿ ಪತ್ರವನ್ನು ಎಇಇ ಶ್ರೀನಿವಾಸ ಪ್ರಸಾದ್‌ಗೆ ಶುಕ್ರವಾರ ಸಲ್ಲಿಸಿದರು.   

ನಂತರ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮತ್ತು ಕಂಪ್ಲಿ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ್ ಮಾತನಾಡಿ, ಕಂಪ್ಲಿ ತಾಲೂಕು ಭಾಗದಲ್ಲಿ ಪ್ರಸ್ತುತ ಜೆಸ್ಕಾಂವತಿಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಕಳೆದ 2-3 ದಿನಗಳಿಂದ ಒಂದು ತಾಸು ಕಡಿತಗೊಳಿಸಿ, ಬರೀ 6 ಗಂಟೆಗಳ ವಿದ್ಯುತ್ ಸರಬರಾಜು ಮಾಡುತ್ತಿರುವುದು ಖಂಡನೀಯವಾಗಿದೆ.

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ತೀವ್ರ ಮಳೆಯ ಅಭಾವ ಉಂಟಾಗಿದ್ದು, ಪರಿಸ್ಥಿತಿ ಅತ್ಯಂತ ಭೀಕರವಾಗಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಬೋರ್‌ವೆಲ್‌ಗಳಲ್ಲಿ ನೀರಿನ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾವುಗಳು ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಜೆಇ ಮಹಾಂತೇಶ, ರೈತ ಮುಖಂಡರಾದ ವೆಂಕಟರಾಮರಾಜು, ಇಟಗಿ ಶರಣೇಗೌಡ, ಆನಂದರೆಡ್ಡಿ ಸುದರ್ಶನ, ನಾಗರಾಜ, ಮಲ್ಲಯ್ಯ, ರಮೇಶ, ನಾಗಪ್ಪ, ಈರಣ್ಣ, ರವಿಚಂದ್ರ ಸೇರಿದಂತೆ ರೈತರಿದ್ದರು.