ಮೈಸೂರು, ಜ 23,ಪ್ರಾಥಮಿಕ, ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ಬ್ಯಾಂಕುಗಳಿಂದ ಪಡೆದುಕೊಂಡಿದ್ದ ರೈತರ ಸುಸ್ತಿ ಸಾಲ ವಸೂಲಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘ ಗುರುವಾರ ಸ್ವಾಗತಿಸಿದೆ. ರೈತರ ಕಳವಳಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮುಂದಿನ ಆದೇಶ ನೀಡುವವರೆಗೆ ಸುಸ್ತಿ ಸಾಲ ವಸೂಲಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಪ್ರಾಥಮಿಕ, ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ ಗಳಿಗೆ ಸಹಕಾರ ಸಂಘಗಳ ರಿಜಿಸ್ಟಾರ್ ಎನ್ .ಎಸ್. ಪ್ರಸನ್ನಕುಮಾರ್ ಆದೇಶಿಸಿ, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಹಾಗೂ ಗ್ರಾಮೀಣಾಭಿವೃದ್ದಿ ಬ್ಯಾಂಕ್ (ಕೆಎಎಸ್ಸಿಎಆರ್ ಡಿ) ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.ಬ್ಯಾಂಕಿನ ವ್ಯವಸ್ಥಾಪಕರು ಈ ಸಂಬಂಧ ಬ್ಯಾಂಕಿ ಜಿಲ್ಲಾ ಶಾಖೆಗಳು ಹಾಗೂ ಪಿಕಾರ್ಡ್ ಬ್ಯಾಂಕ್ ಗಳಿಗೆ ಸೂಚನೆ ನೀಡಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಿದ್ದಾರೆ.ಈ ಹಿಂದಿನ ಸರ್ಕಾರ ಮಾಡಿದ್ದ ಘೋಷಣೆಯಿಂದ ಪಿಕಾರ್ಡ್ ಬ್ಯಾಂಕ್ ಗಳಿಂದ ಟ್ರಾಕ್ಟರ್ ಖರೀದಿಸಲು ಸಾಲ ಪಡೆದಿದ್ದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಶಾಂತಕುಮಾರ್ ಈ ಮೊದಲು ಆರೋಪಿಸಿದ್ದರು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಸರ್ಕಾರ, ಬೆಳೆಸಾಲಮನ್ನಾ ನಂತರ ಟ್ರಾಕ್ಟರ್ ಖರೀದಿಸಲು ರೈತರು ಪಡೆದಿರುವ ಸಾಲಗಳನ್ನೂ ಸಹ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಇದರಿಂದ ರೈತರು ಟ್ರಾಕ್ಟರ್ ಸಾಲದ ಕಂತುಗಳನ್ನು ಪಾವತಿಸಿರಲಿಲ್ಲ, ಆದರೆ ಬ್ಯಾಂಕುಗಳು ಸಾಲ ವಸೂಲಿಗೆ ಮುಂದಾಗಿ, ರೈತರಿಂದ ಖಾಲಿ ಚೆಕ್ಕುಗಳನ್ನು ಸಂಗ್ರಹಿಸಿಕೊಂಡು, ಟ್ರಾಕ್ಟರ್ ಮುಟ್ಟುಗೋಲು ಹಾಕಿಕೊಂಡಿದ್ದವು ಎಂದು ಆರೋಪಿಸಿದ್ದರು.ನೆರೆ ಹಾಗೂ ಬರಪರಿಸ್ಥಿತಿಯಿಂದಾಗಿ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಮೇಲಾಗಿ ತಾವು ಬೆಳೆದ ಕಬ್ಬು, ಭತ್ತದಂತಹ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಲಭಿಸುತ್ತಿಲ್ಲ ಹಾಗಾಗಿ ಸುಸ್ತಿ ಸಾಲ ವಸೂಲಾತಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಹಾಗೂ ಬ್ಯಾಂಕುಗಳು ರೈತರಿಂದ ಪಡೆದುಕೊಂಡಿರುವ ಖಾಲಿ ಚೆಕ್ ಗಳು ಹಾಗೂ ಮುಟ್ಟುಗೋಲುಹಾಕಿಕೊಂಡಿರುವ ಟ್ರಾಕ್ಟರ್ ಗಳನ್ನು ಹಿಂತಿರುಗಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದರು.ರೈತರಿಂದ ಸುಸ್ತಿ ಸಾಲ ವಸೂಲಾತಿಗಾಗಿ ಮಿತಿ ಮೀರಿದ ವರ್ತನೆ ಪ್ರದರ್ಶಿಸುತ್ತಿರುವ ಬ್ಯಾಂಕ್ ಸಿಬ್ಬಂದಿಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಹ ಶಾಂತಕುಮಾರ್ ಒತ್ತಾಯಿಸಿದ್ದರು.