ಲೋಕದರ್ಶನ ವರದಿ
ರಾಯಬಾಗ 31: ತಾಲೂಕಿನ ಜಲಾಲಪೂರ ಗ್ರಾಮದ ಜಲಾಲಪೂರ-ಹಳೇ ದಿಗ್ಗೇವಾಡಿ ಮಾರ್ಗದ ತಾಯಿಬಾಯಿ ದೇವಸ್ಥಾನ ರಸ್ತೆ ಮಹಾ ಮಳೆಗೆ ಕೃಷ್ಣಾ ಪ್ರವಾಹದಿಂದ ಬಿರುಕು ಬಿಟ್ಟುಕತ್ತರಿಸಿ ಬೀಳುತ್ತಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸಲು ತೊಂದರೆಯಾಗಿದೆ. ಕೂಡಲೇ ರಸ್ತೆಯನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಮತ್ತು ರೈತರು ಒತ್ತಾಯಿಸಿದ್ದಾರೆ.
ಜಲಾಲಪೂರದಿಂದ ಹಳೇ ದಿಗ್ಗೇವಾಡಿ ಗ್ರಾಮಕ್ಕೆ ಸಂಪರ್ಕಕಲ್ಪಿಸುವ ಈ ರಸ್ತೆ, ಗುತ್ತಿಗೆದಾರರು ಮಾಡಿರುವ ಕಳಪೆ ಕಾಮಗಾರಿಯಿಂದ ಭಾರಿ ಮಳೆಗೆ ರಸ್ತೆ ಕತ್ತರಿಸಿಬಿದ್ದು ಸಂಚಾರಕ್ಕೆ ಸಂಚಕಾರತಂದಿದೆ.ಗ್ರಾಮದ ರೈತರು ತಮ್ಮ ಜಮೀನುಗಳಿಗೆ ತೆರಳಲು ತುಂಬ ತೊಂದರೆ ಅನುಭವಿಸುವಂತಾಗಿದೆ ಎಂದು ತಾ.ಪಂ.ಸದಸ್ಯ ನಾಮದೇವ ಕಾಂಬಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಮಾರ್ಗವಾಗಿ ದೊಡ್ಡವಾಹನಗಳು ಸಂಚರಿಸುವುದು ಬಂದ್ ಆಗಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಕತ್ತರಿಸಿ ಬೀಳುತ್ತಿರುವ ಈ ರಸ್ತೆ ಸಂಪೂರ್ಣವಾಗಿ ಕತ್ತರಿಸಿ ಕುಸಿದು ಬಿದ್ದರೆ, ತೋಟ ಪಟ್ಟಿಗಳ ಜನರಿಗೆ ತುಂಬಾತೊಂದರೆ ಆಗಲಿದೆ.ಇದರ ಕೂಗಳತೆಯಲ್ಲಿ ಸೇತುವೆ ಇದ್ದು, ಅದಕ್ಕೂ ಅಪಾಯ ತಪ್ಪಿದ್ದಲ್ಲವೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂಬರುವ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಳ್ಳಲಿದ್ದು, ಕತ್ತರಿಸಿ ಕುಸಿದು ಬೀಳುತ್ತಿರುವ ಈ ರಸ್ತೆ ಮಾರ್ಗದಲ್ಲಿ ಟ್ಯಾಕ್ಟರ್ಗಳು ಸಂಚರಿಸಲು ಸಾಧ್ಯವಾಗದೇ ಇರುವುದರಿಂದ ಈ ಭಾಗದ ರೈತರು ತಾವು ಬೆಳೆದ ಕಬ್ಬನ್ನು ಕಟಾವು ಮಾಡಿ ಕಾಖರ್ಾನೆಗಳಿಗೆ ಹೇಗೆ ಕಳುಹಿಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದು, ಈ ಕೂಡಲೇ ರಸ್ತೆಯನ್ನು ಸರಿಪಡಿಸಿ, ಮೇಲ್ದರ್ಜೆಗೇರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಈ ಭಾಗದ ರೈತರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾ.ಪಂ.ಸದಸ್ಯ ನಾಮದೇವ ಕಾಂಬಳೆ, ನಾನಾ ಸೋನಾರ, ಸುಬ್ರಾವ್ ಹವಾಲ್ದಾರ, ಸಂಜು ಹವಾಲ್ದಾರ, ಸಾವಂತ ಪಾಟೀಲ ಉಪಸ್ಥಿತರಿದ್ದರು.