ಜೆಡಿಎಸ್ ವತಿಯಿಂದ ನವಲಗುಂದದಲ್ಲಿ ರೈತ ಹುತಾತ್ಮ ದಿನಾಚರಣೆ ಮಹದಾಯಿ ನ್ಯಾಯಾಧೀಕರಣ ಅಧಿಸೂಚನೆಗೆ ಮೀನಾಮೇಷ: ಕೋನರಡ್ಡಿ

ನವಲಗುಂದ 21: ಮಹದಾಯಿ ನ್ಯಾಯಾಧೀಕರಣ ರಾಜ್ಯಕ್ಕೆ 13.42 ಟಿಎಂಸಿ ನೀರು ಹರಿಸುವಂತೆ  ಆದೇಶ ಮಾಡಿ ಒಂದು ವರ್ಷ ಸಮೀಪಿಸುತ್ತಿದ್ದರೂ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈವರೆಗೆ ಅಧಿಸೂಚನೆ ಹೊರಡಿಸದಿರುವುದರಿಂದ ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ  ಎನ್.ಹೆಚ್. ಕೋನರಡ್ಡಿ ಆಗ್ರಹಿಸಿದರು.

ಅವರು ರವಿವಾರ ಪಟ್ಟಣದ ಹುತಾತ್ಮ ರೈತ ವೀರಗಲ್ಲಿಗೆ ಧಾರವಾಡ ಜಿಲ್ಲಾ ಜೆಡಿಎಸ್ ಹಾಗೂ ನವಲಗುಂದ ತಾಲೂಕು  ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮಾಲಾರ್ಪಣೆ ಮಾಡಿದ ಬಳಿಕ ನೆರೆದ ಅಪಾರ ರೈತ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು.  

   ಕೇಂದ್ರದ ಬಿಜೆಪಿ ಸರಕಾರ ಈವರೆಗೆ ಸಣ್ಣ ಅಧಿಸೂಚನೆ ಹೊರಡಿಸದ ಹಿನ್ನಲೆಯಲ್ಲಿ ಮಹದಾಯಿ, ಕಳಸಾ-ಬಂಡೂರಿ ಕಾಮಗಾರಿ ಆರಂಭಿಸಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಿಲ್ಲ.

ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ, ಹದಿನೈದು ತಾಲೂಕಿನ ನೂರಾರು ಹಳ್ಳಿಗಳ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ತೊಂದರೆ ಆಗುತ್ತಿದೆ.  

ಮಹದಾಯಿ, ಕಳಸಾ-ಬಂಡೂರಿ ಉತ್ತರ ಕರ್ನಾಟಕದ ಭಾಗದ ಜನರ ಜೀವನಾಡಿಯಾಗಿದ್ದು, 200 ಟಿಎಂಸಿ ನೀರು ಕರ್ನಾಟಕದಲ್ಲಿ ಹುಟ್ಟಿ, ಮಹಾರಾಷ್ಟ್ರದಲ್ಲಿ ಹರಿದು ಗೋವಾದಲ್ಲಿ ವ್ಯರ್ಥವಾಗಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಗೋವಾ ರಾಜ್ಯಕ್ಕೆ ಆ ನೀರಿನಿಂದ ಎಳ್ಳಷ್ಟು ಉಪಯೋಗವಿಲ್ಲ. ಅದೇ ನೀರನ್ನು ನೆರೆ ರಾಜ್ಯದ ಜನತೆ ಕುಡಿಯುವ ನೀರಿಗೆ ಬಳಸಿಕೊಳ್ಳಲು ಕೋರುತ್ತಿದ್ದರೂ, ಗೋವಾ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ತಮ್ಮ ಬೇಸರ ಹೊರ ಹಾಕಿದರು.

  ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಕರ್ನಾಟಕ ವಿಧಾನ ಸಭೆಯ ಚುನಾವಣೆ ಪ್ರಚಾರದ ವೇಳೆ ಗದಗ ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆಯನ್ನು ಚುನಾವಣೆ ಮುಗಿದ ತಕ್ಷಣವೇ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದರು.

ಅದೇ ರೀತಿ ಇಂದಿನ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ವಿಧಾನ ಸಭಾ ಚುನಾವಣೆ ಮುಗಿದ ಒಂದು ತಿಂಗಳೊಳಗೆ ಸಮಸ್ಯೆಗೆ ಇತಿಶ್ರೀ ಹಾಡುವುದಾಗಿ ಹೇಳಿಕೆ ನೀಡಿದ್ದರು. ಆದರೆ ಹದಿನಾಲ್ಕು ತಿಂಗಳೂ ಗತಿಸಿದರೂ ಈ ಬಗ್ಗೆಮೌನವಹಿಸಿರುವುದು ನೋಡಿದರೆ ಅವರಿಗೆ ರಾಜ್ಯದ  ಹಿತಕ್ಕಿಂತಲೂ ಗೋವಾದ   ಹಿತವೇ ಮುಖ್ಯ ಎನ್ನುವಂತಾಗಿರುವುದು ದುರ್ದೈವದ ಸಂಗತಿಯಾಗಿದೆ. 

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಕುರಿತು ಪ್ರಧಾನಮಂತ್ರಿಗಳಿಗೆ ಎರಡು ಬಾರಿ ಪತ್ರ ಬರೆದರೂ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ರಾಜ್ಯದ ಪ್ರಧಾನ ಕಾರ್ಯದರ್ಶಿ   ಟಿ.ಎಂ. ವಿಜಯ ಭಾಸ್ಕರ್ ಅವರು ಕೂಡ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಎರಡು ಬಾರಿ ಪತ್ರ ಬರೆದು ತಕ್ಷಣ ಮಹದಾಯಿ ನ್ಯಾಯಾಧೀಕರಣದ ಅಧಿಸೂಚನೆ ಹೊರಡಿಸುವಂತೆ ಕೋರಿದ್ದಾರೆ. ಸಣ್ಣ ಟ್ವೀಟ್ ಗೂ ಸ್ಪಂದಿಸುವ ಈ ನಾಯಕರು ಈ ಕೆಲಸಕ್ಕೆ ಯಾಕೆ ಆಸಕ್ತಿ ತೋರುತ್ತಿಲ್ಲ ಎಂದು ಎನ್.ಹೆಚ್. ಪ್ರಶ್ನಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ನವಲಗುಂದ ತಾಲೂಕು ಅಧ್ಯಕ್ಷ ವೀರಣ್ಣ ನೀರಲಗಿ, ಹುಬ್ಬಳ್ಳಿ ತಾಲೂಕಾ ಅಧ್ಯಕ್ಷ ಶಿವಣ್ಣಾ ಹುಬ್ಬಳ್ಳಿ, ಧಾರವಾಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ  ಬಿ.ಹೆಚ್.ಮೂಗನೂರ, ಜೆ.ಡಿ.ಎಸ್ ತಾಲೂಕಾ ರೈತ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಾಲವಾಡ, ಧಾರವಾಡ ಜಿಲ್ಲಾ ರೈತ ಘಟಕ ಅಧ್ಯಕ್ಷ ಶಿವಶಂಕರ ಕಲ್ಲೂರ, ತಾಲೂಕ ಪಂಚಾಯತ ಸದಸ್ಯರಾದ ಮಲ್ಲಪ್ಪ ಕುರಹಟ್ಟಿ, ಹುಬ್ಬಳ್ಳಿ ತಾಲೂಕ ಪಂಚಾಯತ ಸಾಮಾಜಿಕ ಸ್ಥಾಯಿ ಸಮೀತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ದೇವಪ್ಪ ವಗ್ಗರ, ಎ.ಪಿ.ಎಮ್.ಸಿ ಸದಸ್ಯರಾದ ದ್ಯಾಮಣ್ಣಾ ಹೊನಕುದರಿ, ನಾರಾಯಣ ಮಾಡೊಳ್ಳಿ, ಶ್ರೀಶೈಲ ಮೂಲಿಮನಿ, ನವಲಗುಂದ ಪುರಸಭೆ ಸದಸ್ಯರು, ಜೆ.ಡಿ.ಎಸ್ ಪಕ್ಷದ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.