ಭೂ ಪರಿಹಾರಕ್ಕಾಗಿ ರೈತರ ಅಹೋರಾತ್ರಿ ಧರಣಿ: ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ

ರಾಣೇಬೆನ್ನೂರು30:  ಭೂ ಪರಿಹಾರಕ್ಕಾಗಿ ಹಗಲು-ರಾತ್ರಿ ಅಂತಿಮ ಹೋರಾಟವೆಂದು ಧರಣಿ ನಡೆಸಿದ ಜಿಲ್ಲೆಯ ರೈತರಿಗೆ ಮಂಗಳವಾರ ರಾತ್ರಿ ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ರೈತರೊಂದಿಗೆ ಸಮಾಲೋಚಿಸಿ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು ತೆಗೆದುಕೊಂಡ ಕ್ರಮದ ಭರವಸೆಯಿಂದಾಗಿ ಇದೀಗ ರೈತರಲ್ಲಿ ಶೀಘ್ರ ಪರಿಹಾರ ದೊರೆಯುವುದೆಂಬ ವಿಶ್ವಾಸ ಮೂಡಿದಂತಾಗಿದೆ. 

ಜಿಲ್ಲೆಯ ಅನ್ನದಾತನ ಬದುಕಿಗೆ ಕಳೆದ 35ವರ್ಷಗಳ ಹಿಂದೆ ಆಶಾಕಿರಣವಾಗಿ ಆರಂಭಗೊಂಡಿದ್ದ, ತುಂಗಾ ಮೇಲ್ದಂಡೆ ನೀರಾವರಿ ಯೋಜನೆಯಿಂದ ಹಾವೇರಿ ಜಿಲ್ಲೆ ಹಸಿರಾಗುವ ಕನಸು ಹೊತ್ತ ರೈತರು ಈ ಯೋಜನೆಗೆ ತಮ್ಮ ಅಪಾರವಾದ ಬೆಲೆ ಬಾಳುವ ಭೂಮಿಯನ್ನು ಕೊಟ್ಟು ತ್ಯಾಗ ಮಾಡಿದ್ದರು.  ಆದರೆ, 20ವರ್ಷಗಳಿಂದ ಬಹುತೇಕ ರೈತರು ಪರಿಪೂರ್ಣ ಭೂ ಪರಿಹಾರಕ್ಕಾಗಿ ಕಛೇರಿಯಿಂದ ಕಛೇರಿಗೆ ಅಲೆದಲೆದು ಹೈರಾಣಾಗಿದ್ದರು.  

ಜಿಲ್ಲೆಯ ರೈತರು, ಭೂ ಮಾಲೀಕರು ಮತ್ತು ರೈತ ಪರ ಸಂಘಟನೆಗಳು ಅಲ್ಲಿಂದ ಇಲ್ಲಿಯವರೆಗೂ ಭೂ ಪರಿಹಾರ ಪಡೆಯುವುದಕ್ಕಾಗಿ ನೂರಾರು ಪ್ರತಿಭಟನೆ, ರಸ್ತೆ ತಡೆ, ಧರಣಿ, ಅಹೋರಾತ್ರಿ ಧರಣಿ ನಡೆಸುತ್ತಾ ಬಂದಿದ್ದರೂ ಸಹ ಯಾವುದೇ ಪ್ರಯೋಜನ ಕಾಣದೇ ನಿರಾಸೆ ಭಾವನೆ ಹೊತ್ತು ರೈತರು ಸುಸ್ತಾಗಿದ್ದರು.  ಅಧಿಕಾರಿಗಳು ಮಾತ್ರ ಯಾವುದಕ್ಕೂ ಜಗ್ಗದೇ, ಬಗ್ಗದೇ ತಾವು ದಪ್ಪ ಚರ್ಮದವರೆಂದು ಸಾಬೀತು ಪಡಿಸಿದ್ದರು.  

ಕಳೆದ ರವಿವಾರದಿಂದ ಅಂತಿಮ ಹೋರಾಟವೆಂದು ನಿರ್ಧರಿಸಿಕೊಂಡಿದ್ದ, ರೈತರು ಭೂ ಮಾಲೀಕರು, ತುಂಗಾ ಮೇಲ್ದಂಡೆ ಭೂ ಪರಿಹಾರ ಹೋರಾಟ ಸಮಿತಿ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು.   ಎರಡು ದಿವಸಗಳ ಕಾಲ ರೈತರು, ಹೋರಾಟಗಾರರು ಕೊರೆಯುವ ಚಳಿಯನ್ನು ಲೆಕ್ಕಿಸದೇ, ಯುಟಿಪಿ ಕಛೇರಿ ಮುಂಭಾಗದಲ್ಲಿ ತಮ್ಮ ಪ್ರತಿಭಟನೆ, ಧರಣಿ ಆರಂಭಿಸಿದ್ದರು.   

ಮಂಗಳವಾರ ರಾತ್ರಿ ಧೀಡಿರನೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ, ಉಪ-ವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ, ತುಂಗಾ ಮೇಲ್ದಂಡೆ ಯೋಜನೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ.ಬಿ.ರವಿ, ಕೆ.ಎನ್.ಎನ್.ಸಿಇಓ ಎನ್.ಆರ್.ಬಗಲೆ ಅವರುಗಳು ಧರಣಿ ನಿರತರೊಂದಿಗೆ ಭೂ ಪರಿಹಾರ ವಿಷಯವಾಗಿ ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.  

ರೈತರು ಬಿಗಿಪಟ್ಟು ಸಡಿಲಿಸದೇ, ಪರಿಹಾರ ಹಣ ಬಿಡುಗಡೆಯಾಗುವವರೆಗೂ ತಾವು ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಧರಣಿ ಮುಂದುವರೆಸಿದ್ದರು.  ಪರಿಸ್ಥಿತಿಯನ್ನು ಅವಲೋಕಿಸಿದ, ಜಿಲ್ಲಾಧಿಕಾರಿಗಳು ತಕ್ಷಣವೇ,  ಖಾಯಂ ಭೂಸ್ವಾಧಿನಾಧಿಕಾರಿ ನೇಮಕ ಮಾಡಲು ಆದೇಶಿಸಿ, ಕೂಡಲೇ, ಮೊದಲಹಂತವಾಗಿ ರೈತರಿಗೆ ಬಡ್ಡಿ ರಹಿತ ತಲುಪಬೇಕಾದ 84ಕೋಟಿ  ಹಣವನ್ನು ಬಿಡುಗಡೆಗಾಗಿ ಸಕರ್ಾರಕ್ಕೆ ಪ್ರಸ್ಥಾವನೆ ಸಲ್ಲಿಸಲು ಸೂಚಿಸಿದರು.  

ಇದರಿಂದ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಸಂತೃಪ್ತರಾದ ಜಿಲ್ಲೆಯ 200ಕ್ಕೂ ಹೆಚ್ಚು ರೈತರು ತಮ್ಮ ಧರಣಿಯನ್ನು ಹಿಂಪಡೆದರು.  

 ಜಿಲ್ಲಾಧಿಕಾರಿಗಳ ಕ್ರಮವನ್ನು ರೈತರು ಸ್ವಾಗತಿಸಿ ತಾತ್ಕಾಲಿಕವಾಗಿ ತಮ್ಮ ಧರಣಿಯನ್ನು ಹಿಂಪಡೆದಿದ್ದೇವೆ.  ಜಿಲ್ಲಾಧಿಕಾರಿಗಳ ಆದೇಶದ ಮೇಲೆ ರೈತರಿಗೆ ನಂಬಿಕೆ ಇದೆ.  20ವರ್ಷಗಳಿಂದ ಪರಿಹಾರಕ್ಕಾಗಿ ರೈತರು ಕಛೇರಿಗೆ ಅಲೆದು ಸುಸ್ತಾಗಿದ್ದಾರೆ.  ಜಿಲ್ಲಾಧಿಕಾರಿಗಳ ಆದೇಶ ಕೂಡಲೇ ಜಾರಿಗೆ ಬಂದು ರೈತರಿಗೆ ತಕ್ಷಣವೇ ಪರಿಹಾರ ವಿತರಣೆಯಾಗಬೇಕು.  ಇದು ರೈತರ ಆಶಯ- ರವೀಂದ್ರಗೌಡ ಪಾಟೀಲ. ಹೋರಾಟ ಸಮಿತಿ ಅಧ್ಯಕ್ಷ.

ಧರಣಿ ಮುಂಚೂಣಿಯಲ್ಲಿ ಪ್ರಕಾಶ ಬನ್ನಿಕೋಡ,  ಕರಿಯಪ್ಪ ಸೂರಣಗಿ, ಬಸಪ್ಪ ಮಾಳಗಿ, ಬೋಜರಾಜ ಅರೇರ, ಸುರೇಶಪ್ಪ ಗರಡಿಮನಿ, ಎಸ್.ಡಿ.ಹಿರೇಮಠ, ಈರಣ್ಣ ಬುಡಪನಹಳ್ಳಿ, ಜೆ.ಎಸ್.ಮರಕಳ್ಳಿ, ಪಿ.ಎಸ್. ಚಪ್ಪರದಹಳ್ಳಿಮಠ, ತುಕಾರಾಮ ನವಲೆ, ಎಸ್.ಪಿ. ಬೆಣ್ಣಿ, ಪಿ.ಬಿ. ಗುಬ್ಬಿ, ರಾಜು ಬಣಕಾರ, ಮಂಜಪ್ಪ ಹೊಳಲ, ಮಹೇಶಪ್ಪ ಮೈದೂರು, ಪ್ರಕಾಶ ಸೊರಟೂರು, ರಮೇಶ, ಕೆ.ಬಿ. ಬನ್ನಿಕೋಡ, ರವಿ ಕತಗೇರ, ಮರಿಯಪ್ಪ ಸುರಣಗಿ, ಮಲ್ಲಪ್ಪ ಕೊಡಿಹಳ್ಳಿ, ರಾಮಪ್ಪ ಪಾತ್ರೇರ, ದಿಳ್ಳೆಪ್ಪ ಸತ್ಯಪ್ಪನವರ, ಹನುಮಂತಪ್ಪ ಕಾಗೇರ, ಮಂಜಪ್ಪ ಪಾತ್ರೇರ, ಹನುಮಂತ ಗೋಳೆಣ್ಣನವರ, ಪೀರಸಾಬ್ ದೊಡ್ಡಮನಿ, ರುದ್ರಪ್ಪ ಕಾಯ್ಕದ, ಬಸಪ್ಪ ಇಂಗಳಗೊಂದಿ, ಖಾಸಿಂಸಾಬ್ ಸಣ್ಣಮನಿ, ದಿವಾನ್ಸಾಬ್ ಬನ್ನಿಕೋಡ ಸೇರಿದಂತೆ 200 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.  

ಈ ಸಂದರ್ಭದಲ್ಲಿ ತಹಶೀಲ್ದಾರ ಬಸವನಗೌಡ ಕೊಟೂರ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಡಿ.ವೈಎಸ್ಪಿ ಟಿ.ವಿ.ಸುರೇಶ್, ಸಿಪಿಐ ಸುರೇಶ್ ಸಗರಿ, ಹಲಗೇರಿ ಪಿಎಸ್ಐ ಸಿದ್ಧಾರೊಡ ಬಡಿಗೇರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.