ನೀಲಮಣಿ ರಾಜು ಸೇರಿ ನಿವೃತ್ತ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ

ಬೆಂಗಳೂರು,  ಜ 31, ರಾಜ್ಯದ ಮೂವರು ಹಿರಿಯ ಪೊಲೀಸ್​ ಅಧಿಕಾರಿಗಳು ಇಂದು ನಿವೃತ್ತಿ  ಹೊಂದಲಿರುವ ಹಿನ್ನೆಲೆಯಲ್ಲಿ ನಗರದ ಕೋರಮಂಗಲದ ಕೆಎಸ್ ಆರ್ ಪಿ ಮೈದಾನದಲ್ಲಿ ಮೂವರು  ಅಧಿಕಾರಿಗಳಿಗೆ  ಬೀಳ್ಕೊಡುಗೆ ಪರೇಡ್ ನಡೆಸುವ ಮೂಲಕ ಗೌರವ ಸಲ್ಲಿಸಿ ಬೀಳ್ಕೊಡಲಾಯಿತು.ರಾಜ್ಯದ  ಮೊದಲ ಮಹಿಳಾ ಡಿಜಿಐ ಜಿಪಿ ನೀಲಮಣಿ ಎನ್ ರಾಜು, ಹೊಮ್ ಗಾರ್ಡ್, ಅಗ್ನಿಶಾಮಕ ದಳ ಡಿಜಿಪಿ  ಎಂ.ಎನ್​​ ರೆಡ್ಡಿ ಹಾಗೂ ರಾಜ್ಯ ಪೊಲೀಸ್ ವಸತಿ ಮೂಲಸೌಕರ್ಯ ನಿಗಮದ‌ ಡಿಜಿಪಿ ರಾಘವೇಂದ್ರ  ಔರಾದ್ಕರ್ ನಿವೃತ್ತರಾಗಿದ್ದಾರೆ.

ಜನರಲ್ ಸೆಲ್ಯೂಟ್ ಮೂಲಕ‌ ಮೂವರು ಅಧಿಕಾರಿಗಳಿಗೆ ಗಾರ್ಡ್ ಆಫ್ ಹಾನರ್ ಸಲ್ಲಿಕೆ ಮಾಡಲಾಯಿತು. ಈ  ಸಂದರ್ಭದಲ್ಲಿ ಹಿರಿಯ ಅಧಿಕಾರಿ ರಾಘವೇಂದ್ರ ಔರಾದ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ,  ಸೇವೆಗೆ ಸೇರಿದ ನಂತರ ಒಂದು ದಿನ ಸರ್ಕಾರದಿಂದ ನಿವೃತ್ತಿಯಾಗುವುದು ನಿಶ್ಚಿತ. ಆದರೆ,  ಗುರಿ  ಇಟ್ಟುಕೊಂಡು ಸರ್ಕಾರಿ ಕೆಲಸಕ್ಕೆ ಸೇರಿರುತ್ತೇವೆ ಎಂದರು. ಪೊಲೀಸ್ ಪೇದೆಯಿಂದ ಹಿಡಿದು ಹಿರಿಯ ಅಧಿಕಾರಿಗಳು, ಕುಟುಂಬಸ್ಥರು ನಾನಿಟ್ಟ ಪ್ರತಿ ಹೆಜ್ಜೆಗೂ ಪ್ರಾಮುಖ್ಯತೆ ನೀಡಿದರು ಎಂದು ಸ್ಮರಿಸಿಕೊಂಡರು.

ರಾಷ್ಟ್ರದ  ಬಹುಮುಖ್ಯ ಪ್ರಕರಣ ಛಾಪಾಕಾಗದ ಹಗರಣದ ತನಿಖೆಯನ್ನು ನಾನೇ ಕೈಗೊಂಡಿದ್ದೆ. 33 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿದ್ದೇನೆ. ಈ ಹಂತದಲ್ಲಿ  ಕಹಿಗಿಂತ ಹೆಚ್ಚು ಸಿಹಿ ಅನುಭವವೇ ತಮಗೆ ಆಗಿದೆ ಎಂದು ಹೇಳಿಕೊಂಡರು. 2000ರಲ್ಲಿ  ನಾವೇ ಮೊಟ್ಟ ಮೊದಲು ರಾಜ್ಯದಲ್ಲಿ ಸೈಬರ್ ಕ್ರೈಂ ಠಾಣೆ ತೆರೆದಿದ್ದೆವು. ಪೊಲೀಸ್  ಇಲಾಖೆಯ ವೇತನದ ಅಧ್ಯಯನ ಹಾಗೂ ವರದಿ ನೀಡುವ ಕರ್ತವ್ಯ ನಿರ್ವಹಿಸಿದ್ದೇನೆ.  ಅದೊಂದು  ನಾನು ಮಾಡಿದ ದೊಡ್ಡ ಸಾಧನೆ ಎಂದು ಭಾವಿಸುತ್ತೇನೆ ಎಂದರು. ಈ  ಕಾರ್ಯಕ್ರಮದಲ್ಲಿ ನಿರ್ಗಮಿತ ಡಿಜಿಪಿಗಳ ಕುಟುಂಬ ಸದಸ್ಯರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.