ಹಜ್ ಹೋಗುವ ಯಾತ್ರಿಗಳಿಗೆ ಬೀಳ್ಕೊಡುಗೆ

ಹಜ್ ಹೋಗುವ ಯಾತ್ರಿಗಳಿಗೆ ಬೀಳ್ಕೊಡುಗೆ Farewell to pilgrims going for Hajj

ಲೋಕದರ್ಶನ ವರದಿ 

ಹೊಸಪೇಟೆ 03: ಹೊಸಪೇಟೆಯ ನಗರದ ಅಂಜುಮನ್ ಶಾದಿಮಹಲ್‌ನಲ್ಲಿ ಅಂಜುಮನ್ ಕಮಿಟಿಯ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಸ್ವಂತ ಹಣಕಾಸಿನ ನೆರವಿನಿಂದ ಉಮ್ರಾಗೆ (ಹಜ್) ಹೋಗುವ ಯಾತ್ರಿಗಳಿಗೆ ಬೀಳ್ಕೊಡುಗೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ  ಕಮಿಟಿಯ ಅಧ್ಯಕ್ಷರಾದ ಹೆಚ್‌.ಎನ್‌. ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ರಾಜಕೀಯದಲ್ಲಿ ಸದಾ ಸಕ್ರಿಯರಾಗಿರುವ  ಗೌರವಾನ್ವಿತ ವಸತಿ, ವಕ್ಫ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಶ್ರೀ ಬಿ.ಜೆಡ್‌. ಜಮೀರ್ ಅಹ್ಮದ್ ಖಾನ್ ಅವರು ಈ ಬಾರಿ ರಾಜ್ಯದಾದ್ಯಂತ ಒಟ್ಟು 470 ಆರ್ಥಿಕವಾಗಿ ಹಿಂದುಳಿದ ಯಾತ್ರಿಗಳನ್ನು ತಮ್ಮ ಸ್ವಂತ ಹಣದಿಂದ ಉಚಿತವಾಗಿ ಪವಿತ್ರ ಹಜ್ ಯಾತ್ರೆಗೆ ಕಳುಹಿಸಿಕೊಡುವ ಮೂಲಕ 'ಮಹಾದಾನಿ' ಎನಿಸಿಕೊಂಡಿದ್ದಾರೆ. ಸಚಿವರ ಈ ಐತಿಹಾಸಿಕ ಮತ್ತು ಮಾನವೀಯ ಕಾರ್ಯವನ್ನು ಶ್ಲಾಘಿಸಿ ಇಂದು ಅವರಿಗೆ ಈ ಮೂಲಕ ಅಭಿನಂದನಾ ಸಲ್ಲಿಸುತ್ತೇವೆ ಹಾಗೂ ಇದರಲ್ಲಿ ಜಿಲ್ಲೆಯ 15 ಯಾತ್ರಿಗಳು ಸೇರಿದ್ದಾರೆ, ಉಮ್ರಾ ಯಾತ್ರೆಗೆ ತೆರಳುವ ಯಾತ್ರಿಗಳಿಗೆ ಇಂದು ಸಂಭ್ರಮದ ಬೀಳ್ಕೊಡುಗೆ ನೀಡಲಾಯಿತು. 

ತಮ್ಮ ಸ್ವಂತ ಖರ್ಚಿನಲ್ಲಿ ಬಡ ಯಾತ್ರಿಗಳನ್ನು ಹಜ್ ಗೆ ಕಳುಹಿಸಿಕೊಡುವ ಮೂಲಕ ಸಚಿವರು ಮಾಡಿರುವ ಈ ಮಹಾ ಕಾರ್ಯಕ್ಕೆ ಸಾರ್ವಜನಿಕರಿಂದ ಹಾಗೂ ಕಮಿಟಿ ಮತ್ತು ಸಮುದಾಯದಿಂದ ಅಭಿನಂಧನೆಗಳು ಸಲ್ಲಿಸುತ್ತೇವೆ. 

ರಾಜ್ಯದ ಅನೇಕ ಬಡ ಮುಸ್ಲಿಂರಿಗೆ  ಹಣಕಾಸಿನ ಮುಗ್ಗಟ್ಟಿನಿಂದ ಹಜ್ ಯಾತ್ರೆ ಕನಸಿನ ಮಾತಾಗಿತ್ತು, ಅದರೆ ಸಚಿವರ ಈ ನಿಸ್ವಾರ್ಥ ಸೇವೆ ಮತ್ತು ಬಡವರ ಮೇಲಿನ ಕಾಳಜಿಯಿಂದ ಯಾತ್ರಿಗಳ ಕನಸ್ಸು ನನಸಾಗಿದೆ  ಸಚಿವರಿಗೆ ಅಲ್ಲಾಹನು ಸುಖ ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. 

ಸಚಿವರು ಈಗಾಗಲೇ ಸುಮಾರು 1950 ಬಡ ಮುಸ್ಲಿಂರನ್ನು ಹಜ್ ಯಾತ್ರೆಗೆ ಕಳುಹಿಸಿರುತ್ತಾರೆ, ಈ ವರ್ಷವೂ  ವಿವಿಧ ಜಿಲ್ಲೆಗಳಿಂದ 470 ಜನರನ್ನು ಗುರುತಿಸಿ ಕಳುಹಿಸುತ್ತಿದ್ದಾರೆ. ಜಾತಿ-ಧರ್ಮದ ಹಂಗಿಲ್ಲದೆ ಬಡವರ ಕಷ್ಟಕ್ಕೆ ಸ್ಪಂದಿಸುವ ಸಚಿವರು ಯಾತ್ರಿಗಳ ಸಂಪೂರ್ಣ ವೆಚ್ಚವನ್ನು( ಪ್ರಯಾಣ, ವಸತಿ, ಮ್ತು ಇತರೆ ಸೌಲಭ್ಯಗಳು) ತಾವೇ ಭರಿಸಿದ್ದಾರೆ, ಒಬ್ಬ ಜನಪ್ರತಿನಿಧಿ ಇಷ್ಟು ದೊಡ್ಡ ಮಟ್ಟದಲ್ಲಿ ವೈಯಕ್ತಿಕವಾಗಿ ಧನ ಸಹಾಯ ಮಾಡುವುದು ಅತೀ ವಿರಳ. ಕೇವಲ ಜನಪ್ರತಿನಿಧಿಯಾಗಿ ಮಾತ್ರವಲ್ಲದೇ, ಒಬ್ಬ ನಿಜಬಾದ “ಜನಸೇವಕ” ನಾಗಿ ಹೊರಹೊಮ್ಮಿದ್ದಾರೆ, ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಚಿವರಿಗೆ ಹೃತ್ಪೂರ್ವಕ ಅಭಿನಂಧನೆಗಳ ಸಲ್ಲಿಸುತ್ತೇವೆ ಎಂದು ಹೇಳಿದರು. 

ಹೊಸಪೇಟೆಯಿಂದ ಯಾತ್ರೆಗೆ ಆಯ್ಕೆಯಾದ ಯಾತ್ರಿಗಳು ಮಾತನಾಡಿ ಸಚಿವರು ನಮಗೆ ಮಗನಂತೆ ನಿಂತು ಈ ಪುಣ್ಯ ಕಾರ್ಯಕ್ಕೆ ನೆರವಾಗಿದ್ದಾರೆ, ನಾವು ಪವಿತ್ರ ಮಕ್ಕಾದಲ್ಲಿ ಸಚಿವರ ಆರೋಗ್ಯ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಭಾವುಕರಾದರು. 

ಈ ಕಾರ್ಯಕ್ರಮದಲ್ಲಿ  ಜಿಲ್ಲೆಯ 15 ಹಜ್  ಯಾತ್ರಿಗಳಿಗೆ ಹೂಮಾಲೆ ಹಾಕಿ,ಸಿಹಿ ಹಂಚಿ ಗೌರವಿಸಿದರು. ಯಾತ್ರೆಯು ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥಿಸಿ ಶುಭ ಹಾರೈಸಲಾಯಿತು. ಯಾತ್ರಿಗಳ ಮುಖದಲ್ಲಿ ಸಂಭ್ರಮ ಹಾಗೂ ಸಚಿವರ ಬಗ್ಗೆ ಕೃತಜ್ಞತಾ ಭಾವ ಎದ್ದು ಕಾಣತ್ತಿತ್ತು. 

 ಈ ಅಭಿನಂದನಾ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಭಾಷಾ, ಪೈರೋಜ್ ಖಾನ್, ಎಂ.ಡಿ.ಅಭುಬ್ ಖರ್, ಡಾ. ದರ್ವೇಶ, ಎಮ್‌.ಡಿ. ಮೋಸಿನ್ ಕೊತ್ವಲ್, ಸದ್ದಾಂ ಹುಸೇನ್ ಹಾಗೂ ಸಮುದಾಯದ ಮುಖಂಡರಾಧ ಮುಇರ್ ಅಹಮದ್, ಗಫೂರ ಸಾಬ್, ಶೇಖ್ ಅಹಮ್ಮದ್ ಹಾಗೂ ಯಾತ್ರಿಗಳು ಮತ್ತು ಕುಟುಂಬವರು ಉಪಸ್ಥಿತರಿದ್ದರು.