ದಾವಣಗೆರೆ, ಫೆ 3 : ನಕಲಿ ನೋಟುಗಳನ್ನು ಮುದ್ರಿಸಿ, ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ನೋಟು ಮುದ್ರಿಸುತ್ತಿದ್ದ ಸ್ಥಳದಿಂದ 3.62 ಲಕ್ಷ ರೂ. ಮೊತ್ತದ 100,200,500 ಹಾಗೂ 2000 ರೂ ಮುಖಬೆಲೆಯ ನಕಲಿ ನೋಟುಗಳು, ಎರಡು ಪ್ರಿಂಟರ್ ಗಳು ಮತ್ತು ಕಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಹನುಮಪ್ಪ, ಹಲ್ಲೇಶ್, ಮಂಜಪ್ಪ, ಸಂತೋಷ್, ಚಂದ್ರಪ್ಪ, ಉದಯ, ಸಂತೋಷ್, ಕೃಷ್ಣಪ್ಪ, ನಿಂಗಪ್ಪ, ವೆಂಕಟೇಶ್ ಮತ್ತು ಪುಟ್ಟಪ್ಪ ಎಂದು ಗುರುತಿಸಲಾಗಿದೆ ಎಂಬುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಈ ಸಂಬಂಧ ಚೆಗಟಗೆರೆ ಮತ್ತು ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಬಂಧಿತರು ಹಳ್ಳಿಯ ಜಾತ್ರೆಗಳ ವೇಳೆ ನಕಲಿ ನೋಟು ಚಲಾವಣೆ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.