ಬೆಂಗಳೂರು, ನ 4: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ತಾಕತ್ತಿದ್ದರೆ ಉಪಚುನಾವಣೆ ಎದುರಿಸಿ ಗೆದ್ದು ತೋರಿಸಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯರೇ ಕಾರಣ. ಧರ್ಮಸ್ಥಳದ ಶಾಂತಿವನದದಲ್ಲಿ ಮೈತ್ರಿ ಸರ್ಕಾರ ಪತನಗೊಳಿಸುವ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದರು. ಅನರ್ಹ ಶಾಸಕರಿಗೂ ಬಿಜೆಪಿಗೂ ಸಂಬಂಧ ಇಲ್ಲ. ಅವರು ಯಾವ ಪಕ್ಷ ಸೇರುತ್ತಾರೆ ಎಂಬುದು ಗೊತ್ತಿಲ್ಲ. ಉಪಚುನಾವಣೆಗೆ ಅವರ ಸ್ಪರ್ಧೆ ಬಗ್ಗೆಯೂ ತಮಗೆ ತಿಳಿದಿಲ್ಲ ಎಂದರು. ಅನರ್ಹರ ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರೀಂಕೋರ್ಟ್ಗೆ ಗೊಂದಲ ಹುಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆಡಿಯೋ ವಿಷಯದಲ್ಲಿ ಕಾಂಗ್ರೆಸ್ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಕಾಂಗ್ರೆಸ್ ನಾಯಕರು ಆರೋಪ ಮಾಡುವ ರೀತಿಯಲ್ಲಿ ತಾವು ಮಾತನಾಡಿಲ್ಲ. ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಸಂಚು ರೂಪಿಸುತ್ತಿದೆ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು. ರಾಜೀನಾಮೆ ಕೊಟ್ಟಿರುವ ಶಾಸಕರ ಜೊತೆ ಸಿದ್ದರಾಮಯ್ಯರೇ ಮಾತನಾಡಿದ್ದರು. ಆಡಿಯೋದಲ್ಲಿ ತಮ್ಮ ಹೇಳಿಕೆಗಳನ್ನು ತಿರುಚಲಾಗಿದೆ. ಸುಪ್ರೀಂಕೋರ್ಟ್ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ತಮಗಿದೆ ಎಂದರು. ಆಡಿಯೋ ರೆಕಾರ್ಡ್ ಮಾಡಿದವರು ಯಾರು ಎನ್ನುವ ಪ್ರಶ್ನೆಗೆ ಉತ್ತರಿಸದ ಯಡಿಯೂರಪ್ಪ, ಹುಬ್ಬಳ್ಳಿಯ ಸಭೆಯಲ್ಲಿ ನಡೆದ ಚರ್ಚೆಯೇ ಬೇರೆ. ಆಡಿಯೋ ಮಾಡಿದವರು ಯಾರು ಎನ್ನುವ ಪ್ರಶ್ನೆಯೇ ಇಲ್ಲಿ ಉದ್ಬವಿಸಲ್ಲ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ. ಮೈತ್ರಿ ಸರ್ಕಾರ ಕೆಡವಿದ್ದೇ ಸಿದ್ದರಾಮಯ್ಯ. ಶಾಂತಿವನದಲ್ಲಿ ಕೂತು ಮಾತನಾಡಿ ಮೈತ್ರಿ ಸರ್ಕಾರ ಬೀಳಿಸಿ, ಈಗ ಬಿಜೆಪಿಯ ಮೇಲೆ ಆರೋಪ ಮಾಡುವುದಯ ಎಷ್ಟರ ಮಟ್ಟಿಗೆ ಸರಿ? ಎಂದು ಕಿಡಿಕಾರಿದರು.