ಬೆಂಗಳೂರು,ಮಾ. 6, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಹರಿ ಕೃಷ್ಣ ( 26), ಮುಹಮ್ಮದ್ ಫಿಬಿನ್ ( 24), ಹರಿ ಶಂಕರ್ ( 26), ರಾಹುಲ್ ಬಂಧಿತರು.ಇವರೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ.ಬಂಧಿತರಿಂದ 7ಕೆಜಿ ತೂಕದ ಗಾಂಜಾ, 70ಎಲ್ ಎಸ್ ಡಿ ಸ್ಟ್ರಿಪ್ಸ್ ಗಳು, 12 ಕೆಜಿ 300 ಗ್ರಾಂ ತೂಕದ ಹ್ಯಾಶಿಶ್ ಆಯಿಲ್, 170 ಗ್ರಾಂ ಹ್ಯಾಶಿಶ್ ಉಂಡೆ, 5 ಮೊಬೈಲ್ ಫೋನ್, 3,000 ನಗದು ಸೇರಿ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಎಲ್ಲಾ ವಸ್ತುಗಳ ಮೌಲ್ಯ 50 ಲಕ್ಷ ರೂ ಗಳಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕೆಆರ್ ಪುರಂನ ಬಿರಿಯಾನಿ ಹೌಸ್ ಸರ್ವೀಸ್ ರೋಡ್ ಮುಂಭಾಗದಲ್ಲಿ ನಾಲ್ವರು, ಆಂಧ್ರಪ್ರದೇಶದ ವೈಜಾಕ್ ನಿಂದ ಗಾಂಜಾವನ್ನು ಬಸ್ಸಿನಲ್ಲಿ ತಂದು, ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಲಕ್ಷ್ಮೀಕಾಂತಯ್ಯ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಘಟನೆಗೆ ಸಂಬಂಧಿಸಿದಂತೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.