ನೇತ್ರದಾನ ಅತ್ಯಂತ ಶ್ರೇಷ್ಠ ದಾನ: ಮೀನಾಕ್ಷಿ ಬಣ್ಣದಭಾವಿ

ನೇತ್ರದಾನ ಅತ್ಯಂತ ಶ್ರೇಷ್ಠ ದಾನ: ಮೀನಾಕ್ಷಿ ಬಣ್ಣದಭಾವಿ  Eye donation is the noblest form of donation: Meenakshi Bannadabhavi


ಕೊಪ್ಪಳ, ಸೆ. 06: ಮಾನವೀಯತೆ ಮತ್ತು ಸಾಮಾಜಿಕ ಕಳಕಳಿಯ ಪ್ರತೀಕವಾಗಿರುವ ನೇತ್ರದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು, ನೇತ್ರಹೀನರ ಬಾಳಿನಲ್ಲಿ ಬೆಳಕು ಮೂಡಿಸುವ ಮಹತ್ವದ ಕಾರ್ಯವಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದಭಾವಿ ಹೇಳಿದರು.  

ನಗರದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಹಾಗೂ ಎಂ.ಎಂ. ಜೋಶಿ ನೇತ್ರ ಆಸ್ಪತ್ರೆ, ಕೊಪ್ಪಳ ಇವರ ಸಹಯೋಗದಲ್ಲಿ ಆಯೋಜಿಸಿದ್ದ ನೇತ್ರದಾನ ಜಾಗೃತಿ ಜಾಥಾದ ನೇತೃತ್ವ ವಹಿಸಿ ಅವರು ಮಾತನಾಡಿದರು.  

ಮರಣದ ನಂತರವೂ ಮತ್ತೊಬ್ಬರ ಬದುಕಿಗೆ ಹೊಸ ಬೆಳಕು ನೀಡಬಹುದಾದ ಮಹಾದಾನ ನೇತ್ರದಾನವಾಗಿದೆ. ದಾನವಾಗಿ ಪಡೆದ ಕಣ್ಣುಗಳ ಕಾರ್ನಿಯಾವನ್ನು ಅಗತ್ಯವಿರುವ ದೃಷ್ಟಿಹೀನರಿಗೆ ಅಳವಡಿಸುವ ಮೂಲಕ ಅವರಿಗೆ ದೃಷ್ಟಿ ಮರಳಿ ದೊರೆಯುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಯೊಬ್ಬರೂ ನೇತ್ರದಾನದ ಮಹತ್ವ ಅರಿತು, ಮರಣಾನಂತರ ತಮ್ಮ ನೇತ್ರಗಳನ್ನು ದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.  

ನೇತ್ರದಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಚಾಲನೆ ನೀಡಿ ಆಶೀರ್ವದಿಸಿದರು. ಗವಿಮಠದ ಆವರಣದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಎಂ.ಎಂ. ಜೋಶಿ ನೇತ್ರ ಆಸ್ಪತ್ರೆಗೆ ಜಾಥಾ ಸಾಗಿತು.  

ಜಾಥಾದಲ್ಲಿ ನೇತ್ರದಾನದ ಮಹತ್ವದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಜೊತೆಗೆ, ನೇತ್ರದಾನ ಮಾಡಲು ಪ್ರೇರೇಪಿಸಲಾಯಿತು.  ಈ ಸಂದರ್ಭದಲ್ಲಿ ಕ್ಲಬ್ನ ಕಾರ್ಯದರ್ಶಿ ಶ್ರೀದೇವಿ ಪಾಟೀಲ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. ಎಂ.ಎಂ. ಜೋಶಿ ನೇತ್ರ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯೂ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.