ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಏಪ್ರಿಲ್ 30 ರವರೆಗೆ ವಿಸ್ತರಣೆ : ಟ್ರಂಪ್

ವಾಷಿಂಗ್ಟನ್, ಮಾರ್ಚ್ 30,ಕೊರೊನಾ ಸೋಂಕು ತಡೆಯಲು ಅಮೆರಿಕದ ಪ್ರಜೆಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮಗಳು ಏಪ್ರಿಲ್ 30ರವರೆಗೆ ಅನ್ವಯವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕು ನಿಯಂತ್ರಣ ಸಂಬಂಧ ಪ್ರಜೆಗಳಿಗೆ ನೀಡಿರುವ ಅಂತರ ಕಾಯ್ದುಕೊಳ್ಳಬೇಕಾದ ಮಾರ್ಗದರ್ಶಿ ಸೂತ್ರಗಳ ಪಾಲನಾ ಅವಧಿಯನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.ಮಂಗಳವಾರ ಸರ್ಕಾರ ಕೈಗೊಳ್ಳಲಿರುವ ಯೋಜನೆಗಳ ಕರಡು ಪೂರ್ಣಗೊಳ್ಳಲಿದ್ದು ಸರ್ಕಾರ ಪತ್ತೆ ಮಾಡಿರುವ ವಿವರಗಳು, ಸಂಬಂಧಪಟ್ಟ ಪುಷ್ಠೀಕರಿಸುವ ದಾಖಲೆಗಳನ್ನು, ಅನುಸರಿಸಲಿರುವ ತಂತ್ರಗಳ ಸಂಕ್ಷಿಪ್ತ ವಿವರಗಳನ್ನು ಪ್ರಜೆಗಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.ಅಮೆರಿಕದಲ್ಲಿ ಇನ್ನೆರಡು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು ಜೂನ್ 1 ರ ವೇಳೆಗೆ ಚೇತರಿಸಿಕೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಸೋಂಕಿನಿಂದಾಗಿ ದೇಶದಲ್ಲಿ 1 ರಿಂದ 2 ಲಕ್ಷ ಸಾವು ಸಂಭವಿಸುವ ಅಪಾಯವಿದೆ ಎಂದು ಆರೋಗ್ಯ ತಜ್ಞ ಆಂಟೋನಿ ಫೌಕಿ ಭಾನುವಾರ ಎಚ್ಚರಿಕೆ ನೀಡಿದ್ದರು.   15 ದಿನಗಳಿಗಾಗಿ ರೂಪಿಸಲಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಾವಳಿಗಳನ್ನು ವಿಸ್ತರಿಸಲಾಗಿದೆ. ಅಮೆರಿಕದ ಪ್ರಜೆಗಳು ಅನಗತ್ಯ ಪ್ರಯಾಣ ಕೈಗೊಳ್ಳದಂತೆ, 10 ಕ್ಕಿಂತ ಹೆಚ್ಚು ಜನ ಒಟ್ಟಿಗೆ ಸೇರದಂತೆ, ವೃದ್ಧರಿಂದ ಮನೆಗಳಿಂದ ಹೊರಬರದಂತೆ ಕೋರಲಾಗಿದೆ. ಅಮೆರಿಕದಲ್ಲಿ ಈವರೆಗೆ 137000 ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು 2400 ಕ್ಕೂ ಹೆಚ್ಚು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.