ಸಹಕಾರಿ ಬ್ಯಾಂಕುಗಳಿಂದ ಸಾಲಗಾರರ ಶೋಷಣೆ: ಗಣಪತಿ ನಾಯ್ಕ ಆರೋಪ
Exploitation of borrowers by cooperative banks: Ganapathi Naik alleges
ಸಹಕಾರಿ ಬ್ಯಾಂಕುಗಳಿಂದ ಸಾಲಗಾರರ ಶೋಷಣೆ: ಗಣಪತಿ ನಾಯ್ಕ ಆರೋಪ
ಕಾರವಾರ 31 : ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಮತ್ತು ಸೌಹಾರ್ದ ಬ್ಯಾಂಕುಗಳ ಅಕ್ರಮಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾನೂನು ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಸಾಲಗಾರರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಭಟ್ಕಳ ಸಾಲಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ ಗಂಭೀರ ಆರೋಪ ಮಾಡಿದರು.ಗುರುವಾರ ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬ್ಯಾಂಕುಗಳ ನಿಯಮ ಉಲ್ಲಂಘನೆಗಳಿಂದ ಹಲವು ಸಾಲಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕೆಲವರು ಜೈಲು ಸೇರಿದ್ದಾರೆ, ಇನ್ನೂ ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಜಿಲ್ಲೆಯ ಕೆಲವು ಸಹಕಾರಿ ಬ್ಯಾಂಕುಗಳು ಸಾಲದ ಹೆಸರಿನಲ್ಲಿ ಗ್ರಾಹಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಗಣಪತಿ ನಾಯ್ಕ ದೂರಿದ್ದಾರೆ. ಬಡವರಿಗೆ ಒಂದು ನಿಯಮ, ಶ್ರೀಮಂತರಿಗೆ ಇನ್ನೊಂದು ನಿಯಮ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಉದಾಹರಣೆಗೆ, ಬಡವರು 1 ಲಕ್ಷ ಸಾಲ ಕೇಳಿದರೆ, ಷೇರು ಮತ್ತು ಎಫ್.ಡಿ. ಹೆಸರಿನಲ್ಲಿ ಸುಮಾರು 30,000 ಕಡಿತಗೊಳಿಸಲಾಗುತ್ತದೆ, ಆದರೆ ಬಡ್ಡಿಯನ್ನು ಮಾತ್ರ ಸಂಪೂರ್ಣ 1 ಲಕ್ಷದ ಮೇಲೆ ಲೆಕ್ಕ ಹಾಕಲಾಗುತ್ತದೆ. ಬ್ಯಾಂಕಿನ ನಿರ್ದೇಶಕರು ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದರೂ, ಅವರ ತಪ್ಪುಗಳ ಹೊರೆ ಬಡ ಸಾಲಗಾರರ ಮೇಲೆ ಬೀಳುತ್ತಿದೆ ಎಂದು ಅವರು ಆರೋಪಿಸಿದರು.ಸಾಲಗಾರರ ಬಳಿ ಆಸ್ತಿ ಇದ್ದರೂ ಜಾಮೀನಾದಾರರ ಆಸ್ತಿಯನ್ನು ವಶಪಡಿಸಿಕೊಳ್ಳುವುದು ಮತ್ತು ಖಾಲಿ ಚೆಕ್‌ಗಳನ್ನು ಪಡೆಯುವುದು ಸಹಕಾರಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೂ ಹಲವಾರು ಸಹಕಾರಿ ಬ್ಯಾಂಕುಗಳು ಈ ಅಕ್ರಮಗಳನ್ನು ಮುಂದುವರಿಸುತ್ತಿವೆ. ಇಂದು ರಾಜ್ಯದಲ್ಲಿ ಸಾಲಗಾರರಿಗಿಂತ ಬ್ಯಾಂಕುಗಳೇ ಹೆಚ್ಚಾಗಿವೆ. 'ಅಭಿವೃದ್ಧಿ' ಹೆಸರಿನಲ್ಲಿ ವಿಸ್ತಾರಗೊಳ್ಳುತ್ತಿರುವ ಈ ಸಂಸ್ಥೆಗಳು ಸಾಲಗಾರರನ್ನು ಜೈಲಿಗೆ ತಳ್ಳುತ್ತಿವೆ. 'ಸಹಕಾರ' ಪದದ ಅರ್ಥವೇ ಸಂದಿಗ್ಧವಾಗಿದೆ ಎಂದು ಗಣಪತಿ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. ಉದ್ಯೋಗಕ್ಕಾಗಿ ಲಂಚ ಕೇಳಲಾಗುತ್ತಿದೆ ಎಂದೂ ಅವರು ದೂರಿದ್ದಾರೆ.ಸಾಲಗಾರರ ಸಂಘದ ಉಪಾಧ್ಯಕ್ಷ ಎಂ.ಡಿ. ನಾಯ್ಕ ಮಾತನಾಡಿ, ಸಹಕಾರಿ ಬ್ಯಾಂಕುಗಳು ಸಾಲ ವಸೂಲಿಗೆ ನ್ಯಾಯಾಲಯವನ್ನೇ ಆಶ್ರಯಿಸಿ, ಬಡ ಸಾಲಗಾರರನ್ನು ಬಲಿಪಶುಗಳನ್ನಾಗಿ ಮಾಡುತ್ತಿವೆ. ಬ್ಯಾಂಕ್ ಸಿಬ್ಬಂದಿ ಹೆಚ್ಚಿನ ಸಮಯವನ್ನು ನ್ಯಾಯಾಲಯದಲ್ಲಿ ಕಳೆಯುತ್ತಿದ್ದಾರೆ.
ಸಾಲ ಮರುಪಾವತಿಸಲು ಸಾಧ್ಯವಾಗದೆ ರಾಜ್ಯದಲ್ಲಿ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಹಲವು ಬಡ ಸಾಲಗಾರರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.ಕೆಲವು ಸಹಕಾರಿ ಸಂಘಗಳು ಮತ್ತು ಹಣಕಾಸು ಸಂಸ್ಥೆಗಳು ಸಹಕಾರಿ ನಿಯಮ ಮೀರಿ ಕಾರ್ಯನಿರ್ವಹಿಸುತ್ತಿರುವುದರಿಂದ, ಬಡ ಸಾಲಗಾರರಿಗೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ಸಾಧ್ಯವಾಗದೆ ಭಯಭೀತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಂ.ಡಿ. ನಾಯ್ಕ ಹೇಳಿದರು.ತಾವು ಕಳೆದ 19 ವರ್ಷಗಳಿಂದ ಸಂಘಟನೆಯನ್ನು ನಡೆಸಿಕೊಂಡು ಬರುತ್ತಿದ್ದು, ಕಷ್ಟದಲ್ಲಿದ್ದ ಅನೇಕ ಸಾಲಗಾರರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಸಾಲಕ್ಕೆ ಸಾವೇ ಪರಿಹಾರವಲ್ಲ ಎಂದು ಸಾಲಗಾರರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.ಇತ್ತೀಚೆಗೆ ಕೆಲವು ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರ ಹಣ ಭಾರಿ ಪ್ರಮಾಣದಲ್ಲಿ ಲೂಟಿಯಾಗಿದ್ದು, ಕೆಲವು ಅಧಿಕಾರಿಗಳು ಜೈಲಿಗೆ ಹೋದ ಉದಾಹರಣೆಗಳೂ ಇವೆ. ಸಾಲಗಾರರು ಕಷ್ಟಪಟ್ಟು ದುಡಿದು ಕಟ್ಟಿದ ಹಣವೂ ಲೂಟಿಯಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಮಾತ್ರ ನೂರಾರು ಸಾಲಗಾರರ ಮೇಲೆ ನ್ಯಾಯಾಲಯದ ವಾರಂಟ್‌ಗಳಿದ್ದು, ಅವರ ಗೋಳು ಹೇಳತೀರದ್ದಾಗಿದೆ. ವಾರಂಟ್ ಇರುವ ಸಾಲಗಾರರು ನಮಗೆ ಕರೆ ಮಾಡಿ, ಬ್ಯಾಂಕಿಗೆ ಬಹಳಷ್ಟು ಹಣ ಕಟ್ಟಿದ್ದರೂ ಸಾಲ ತೀರಲಿಲ್ಲ, ಈಗ ವಾರಂಟ್ ಹೊರಡಿಸಿದ್ದಾರೆ, ಬ್ಯಾಂಕಿನವರು ಯಾವಾಗ ನಮ್ಮನ್ನು ಕೊಂಡೊಯ್ಯುತ್ತಾರೋ ಗೊತ್ತಿಲ್ಲ, ಹೇಗಾದರೂ ಮಾಡಿ ನಮ್ಮನ್ನು ಈ ಸಮಸ್ಯೆಯಿಂದ ಹೊರತನ್ನಿ ಎಂದು ಗೋಳಾಡುತ್ತಿದ್ದಾರೆ.
ಕೆಲವರು ಹಣ ಕಟ್ಟಲು ಸಾಧ್ಯವಾಗದೆ ಜೈಲಿನಲ್ಲಿದ್ದಾರೆ ಎಂದು ಎಂ.ಡಿ. ನಾಯ್ಕ ವಿವರಿಸಿದರು.ಸಾಲಗಾರರ ರಕ್ಷಣೆಯೇ ನಮ್ಮ ಗುರಿ:ಸಾಲಗಾರರು ಕಷ್ಟಪಟ್ಟು ದುಡಿದು ಸಾಲದ ಅಸಲು ಮತ್ತು ಬಡ್ಡಿಯನ್ನು ಕಟ್ಟಿದರೂ, ಬ್ಯಾಂಕ್ ನೌಕರರು ಕೈತುಂಬಾ ಸಂಬಳ ಪಡೆದು ಸುಖವಾಗಿ ಜೀವನ ನಡೆಸುತ್ತಿದ್ದಾರೆ, ಆದರೆ ಸಾಲಗಾರರನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಸಂಘದವರು ಅಸಮಾಧಾನ ವ್ಯಕ್ತಪಡಿಸಿದರು.ಸಾಲಗಾರರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ, ಸಂಘದ ವತಿಯಿಂದ ಮುಂದಿನ ವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಗಣಪತಿ ನಾಯ್ಕ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಕೋರಲಾಗಿದ್ದು, ಸಂಬಂಧಿತ ಇಲಾಖಾ ಅಧಿಕಾರಿಗಳು ಸಹಕಾರಿ ಕಾನೂನು ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜಿಲ್ಲೆಯ ಎಲ್ಲಾ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಾಲಗಾರರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ಯಾವುದೇ ಸಾಲಗಾರರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಸಾಲಕ್ಕೆ ಸಾವೇ ಪರಿಹಾರವಲ್ಲ ಎಂದು ಸಂಘದ ವತಿಯಿಂದ ಮನವಿ ಮಾಡಿಕೊಂಡರು. ಸಾಲಗಾರರ ರಕ್ಷಣೆಯೇ ನಮ್ಮ ಸಂಘದ ಗುರಿ ಎಂದು ಅವರು ಪುನರುಚ್ಚರಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂಜೀವ ನಾಯ್ಕ, ಶಂಕರ್ ನಾಯ್ಕ, ವೆಂಕಟೇಶ್ ನಾಯ್ಕ, ಕೃಷ್ಣಾ ನಾಯ್ಕ, ಗಜಾನನ ಆಚಾರಿ, ಸತೀಶ್ ಆಚಾರಿ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು..
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 