ಅನುಭವದ ಕಲಿಕೆ ಶಾಶ್ವತ : ಡಾ. ಅಶೋಕ

Experiential learning is eternal: Dr. Ashoka

ಅನುಭವದ ಕಲಿಕೆ ಶಾಶ್ವತ : ಡಾ. ಅಶೋಕ  

ಬೆಳಗಾವಿ 28: ಹುಲಗಬಾಳಿಪಠ್ಯ ಪುಸ್ತಕಗಳಿಂದ ಪಡೆದ ಜ್ಞಾನ ಕೆಲವು ವರ್ಷಗಳ ನಂತರ ಮರೆತುಹೋಗಬಹುದು. ಆದರೆ ಪ್ರಯೋಗಾಲಯದಲ್ಲಿ ಹಾಗೂ ಜೀವನದಲ್ಲಿ ಪ್ರಾಯೋಗಿಕವಾಗಿ ಅನುಭವಗಳಿಂದ ಕಲಿತ ವಿದ್ಯೆ ಶಾಶ್ವತವಾಗಿ ಸ್ಮೃತಿ ಪಟಲದಲ್ಲಿ ಉಳಿಯುತ್ತದೆ. ಇಂತಹ  ವಿದ್ಯೆ ನೀಡುವ ವಾತಾವರಣ ಶಿಕ್ಷಕರು ಸೃಷ್ಟಿಸಬೇಕು ಎಂದು ಎಸ್‌.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಶೋಕ ಹುಲಗಬಾಳಿ ಅಭಿಪ್ರಾಯಪಟ್ಟರು. ಅವರು ಇಂದು ರಾಜ್ಯ ವಿಜ್ಞಾನ ಪರಿಷತ್ತು ಡಾ. ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಹಾಗೂ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಇನ್ನೋರ್ವ ಅತಿಥಿ ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಮಾತನಾಡಿ ದೇಶದ ವಿಜ್ಞಾನ ಕ್ಷೇತ್ರಕ್ಕೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಜೀವನ ಚರಿತ್ರೆ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರಲ್ಲಿದ್ದ ಆತ್ಮವಿಶ್ವಾಸ, ಸಂಶೋಧನಾ ಪ್ರವೃತ್ತಿ, ಅಪ್ಪಟ ದೇಶಿಯ ಭಾವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಲ್‌. ಪಾಟೀಲ ಮಾತನಾಡಿ ಸಂಪ್ರದಾಯ ಮತ್ತು ವಿಜ್ಞಾನ ಜೊತೆಯಾಗಿ ಸಾಗಿದಾಗ ನಾಡಿನಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ.  

ಸಂಪ್ರದಾಯಕ್ಕೆ ಜ್ಯೋತು ಬಿದ್ದು ವಿಜ್ಞಾನ ಮರೆಯಬಾರದು, ವಿಜ್ಞಾನ ಲೋಕದಲ್ಲಿ ತೇಲುತ್ತಾ ಸಂಸ್ಕೃತಿ ಸಂಸ್ಕಾರ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ಅಸೋಸಿಯೇಷನ್ ಫಾರ್ ಸೈನ್ಸ್‌ ಎಜುಕೇಶನ್ ಕಾರ್ಯದರ್ಶಿ ಮನೋಹರ ಉಳ್ಳೇಗಡ್ಡಿ, ವಿಜ್ಞಾನ ನಿಂತ ನೀರಲ್ಲ, ಪ್ರತಿದಿನ ಒಂದಿಲ್ಲ ಒಂದು ಆವಿಷ್ಕಾರಗಳು ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುತ್ತವೆ. ಭವಿಷ್ಯದ ಶಿಕ್ಷಕರಾಗುವವರು ಇವುಗಳ ಕುರಿತು ಜ್ಞಾನ ಹೊಂದಿರಬೇಕು ಎಂದರು.ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಬಿ.ಎಡ್‌. ಪ್ರಶಿಕ್ಷಣಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.  

ಸ್ಪರ್ಧೆಯಲ್ಲಿ ಸೌಜನ್ಯ ಇಟ್ನಾಳ, ಐಶ್ವರ್ಯ ಹುಲಕುಂದ ತಂಡ ಪ್ರಥಮ ಸ್ಥಾನ, ಮಂಜುಷಾ ಕರಿಮುದಕನ್ನವರ, ಶ್ವೇತಾ ಪಾಟೀಲ ದ್ವೀತಿಯ ಸ್ಥಾನ ಹಾಗೂ ವಿಶಾಲಾ ಕಲ್ಮಠ, ಜ್ಯೋತಿ ಪಡೆನ್ನವರ ತಂಡ ತೃತೀಯ ಸ್ಥಾನ ಪಡೆದುಕೊಂಡರು.ಪ್ರಾರಂಭದಲ್ಲಿ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಶ್ರೀಧರ ಕಿಳ್ಳಿಕೇತರ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿಗಳಾದ ಲಾವಣ್ಯ ಮರಡಿ ಹಾಗೂ ಸೋನಾಲಿ ಯಶವಂತ ನಿರೂಪಿಸಿದರು. ಕೊನೆಗೆ ವಿಜಯಲಕ್ಷ್ಮಿ ವಂದಿಸಿದರು.