ಧಾರವಾಡ 27: ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಜೂನ 24ರಂದು ನಡೆಯುತ್ತಿದ್ದ ವಿಜ್ಞಾನ ಪರೀಕ್ಷೆಯಲ್ಲಿ ನೈಜ ಅಭ್ಯರ್ಥಿಗಳ ಬದಲಾಗಿ ನಕಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವದು ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ದಿಡೀರ್ ಭೇಟಿಯಲ್ಲಿ ಕಂಡುಬಂದಿದ್ದು ತಕ್ಷಣವೇ ಕೂಲಂಕಷವಾಗಿ ಪರಿಶೀಲಿಸಿ ನಕಲಿ ಅಭ್ಯರ್ಥಿಗಳ ವಿರುದ್ಧ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಸಂಬಂಧಿಸಿದ ಕೊಠಡಿ ಮೇಲ್ವಿಚಾರಕರು ಮತ್ತು ಪರೀಕ್ಷಾ ಅಧೀಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೇಜರ್ ಸಿದ್ಧಲಿಂಗಯ್ಯ ಆದೇಶಿಸಿದರು ಮತ್ತು ಪರೀಕ್ಷಾ ಕಾರ್ಯದಿಂದ ಬಿಡುಗಡೆಗೊಳಿಸಲು ಸೂಚಿಸಿದರು. ಅಲ್ಲದೇ ಇದೇ ರೀತಿ ಕರ್ತವ್ಯಲೋಪ ಮುಂದುವರೆದಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಮೇಲೆ ಬಿಇಓಗಳ ಮೇಲು ಕ್ರಮಕೈಗೊಳ್ಳಲಾಗುವದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಆಯುಕ್ತರು 7 ವಿದ್ಯಾರ್ಥಿಗಳನ್ನು ಹಾಗೂ ಮಾನ್ಯ ಉಪನಿರ್ದೇಶಕರು (ಅಭಿವೃದ್ಧಿ) ಯವರು ಇಬ್ಬರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ತಕ್ಷಣವೇ ಎಫ್ಐಆರ್ ದಾಖಲಿಸಲು ಆದೇಶಿಸಿದರು.
ಮೊರಬ ಚಿದಾನಂದ ಕಾಳಪ್ಪ ಕಮ್ಮಾರ, ಸಂಗ್ರೇಶಕೊಪ್ಪದ ಭೀಮಪ್ಪ ಮಡಿವಾಳಪ್ಪ ಕರಿಕಟ್ಟಿ, ಶಿರಕೋಳ ಭೀಮಪ್ಪ ಸೋಮಪ್ಪ ನಾಯ್ಕರ, ಕುವಿನಕೊಪ್ಪ ಬಸವರಾಜ ವಿರುಪಕ್ಷಪ್ಪಾ ಧಾರವಾಡ, ಕೊಟಬಾಗಿ ಸಂಜು ಹನುಮಂತಪ್ಪಾ ಹಂಚಿನಮನಿ, ಮೊರಬ ಸಲೀಂ ಸಿದ್ದಿಲಾಲ ಮೊಖಾಶಿ, ಮೊರಬ ಮಹಾವೀರ ಯೋಗಪ್ಪಾ ಸತ್ತೂರ, ಸಂಗ್ರೇಶಕೊಪ್ಪದ ಪ್ರಶಾಂತಯ್ಯಾ ಶಿವಬಸಯ್ಯಾ ಚಿಕ್ಕಮಠ, ಶಿರಗುಪ್ಪಿ ದೇವೇಂದ್ರಪ್ಪಾ ನಿಂಗಪ್ಪಾ ಯರಗುಪ್ಪಿ ಅಸಲಿ ವಿದ್ಯಾರ್ಥಿ ಗಳಾಗಿದ್ದು, ಕ್ರಮವಾಗಿ ಇವರ ಬದಲಾಗಿ ಮೊರಬಶಿವರಾಜ ಮುತ್ತಣ್ಣ ಜಾಲಿಹಾಳ, ಸಂಗ್ರೇಶಕೊಪ್ಪ ಫಕ್ಕೀರಪ್ಪ ಬಸಪ್ಪ ಬಡಕಣ್ಣವರ, ಶಿರಕೋಲ ಚಿದಾನಂದ ಶಿವಪ್ಪಾ ನವಲಗುಂದ, ಕುರವಿನಕೊಪ್ಪ ಮಹೇಶ ದ್ಯಾಮಣ್ಣಾ ಪಾಟೀಲ, ಕೊಟಬಾಗಿ ಪ್ರವೀಣ ಮಲ್ಲಿಕಾರ್ಜುನ ಹಂಚಿನಮನಿ, ಮೊರಬ ಮೈಲಾರಪ್ಪಾ ಯೋಗಪ್ಪಾ ಗೋಲನಾಯ್ಕರ, ಮೊರಬ ನಿಂಗಪ್ಪಾ ಗಂಗಪ್ಪಾ ಕಂಬಳಿ, ಸಂಗ್ರೇಶಕೊಪ್ಪ ಅನೀಲ ಶಿವಬಯ್ಯಾ ಚಿಕ್ಕಮಠ, ಮೊರಬ ಮಂಜುನಾಥ ಶಿವಪ್ಪಾ ಕರೆಮನಿ ನಕಲಿ ವಿದ್ಯಾರ್ಥಿಗಳು ಸಿಕ್ಕಿದ್ದು ಸದರಿಯವರ ಬಳಿ ಇದ್ದ ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಕ್ಕೆ ಬೆಂಗಳೂರಿನಿಂದ ಬಂದಂತಹ ನಾಮಿನಲ್ ರೋಲ್ಗಳನ್ನು ತಾಳೆಮಾಡಲಾಗಿ ಸದರಿಯವರು ನಕಲಿ ವಿದ್ಯಾರ್ಥಿಗಳು ಎಂದು ಖಚಿತವಾಯಿತು.
ಈ ನಕಲಿ ವಿದ್ಯಾರ್ಥಿಗಳು ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿರುವದನ್ನು ಗಮನಿಸಿ ವಿದ್ಯಾಗಿರಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಧಾರವಾಡ. ಕ್ಷೇತ್ರ ಶಿಕ್ಷಣಾಧಿಕಾರಗಳು ತಿಳಿಸಿದ್ದಾರೆ.