ನೇತ್ರದಾನಕ್ಕೆ ಎಲ್ಲರೂ ಮುಂದಾಗಬೇಕು: ಶಿವಾನಂದ ವಿ.ಪಿ.

ನೇತ್ರದಾನಕ್ಕೆ ಎಲ್ಲರೂ ಮುಂದಾಗಬೇಕು: ಶಿವಾನಂದ ವಿ.ಪಿ.  Everyone should come forward for eye donation: Shivananda V.P.

ಲೋಕದರ್ಶನ ವರದಿ  

ಬಳ್ಳಾರಿ, ಸೆ.04 (ಕರ್ನಾಟಕ ವಾರ್ತೆ): ದೃಷ್ಟಿಹೀನತೆಯ ನಿವಾರಣೆಗೆ ಸಾರ್ವಜನಿಕರಲ್ಲಿ ನೇತ್ರದಾನದ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಎಲ್ಲರೂ ನೇತ್ರದಾನಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಕರೆ ನೀಡಿದರು.  ತಾಲೂಕಿನ ಎಮ್ಮಿಗನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ವಿಭಾಗ, ಕಂಪ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಆ.25ರಿಂದ ಸೆ.8ರವರೆಗೆ ನೇತ್ರದಾನ ಪಾಕ್ಷಿಕ  

ಪ್ರತಿ ವರ್ಷ ಆಗಸ್ಟ್‌ 25ರಿಂದ ಸೆಪ್ಟೆಂಬರ್ 8ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಜಾಗೃತಿ ಅಭಿಯಾನವನ್ನು ಆಚರಿಸಲಾಗುತ್ತದೆ. ಕಣ್ಣುಗಳು ಮಾನವನ ಪಂಚೇಂದ್ರಿಯಗಳಲ್ಲಿ ಅತ್ಯಂತ ಅಮೂಲ್ಯವಾದ ಅಂಗವಾಗಿವೆ. ಕಾರ್ನಿಯಾ ಸಮಸ್ಯೆಯಿಂದ ದೃಷ್ಟಿ ಕಳೆದುಕೊಂಡವರಿಗೆ ಮರಣೋತ್ತರ ನೇತ್ರದಾನದ ಮೂಲಕ ಕಾರ್ನಿಯಾವನ್ನು ಸಂಗ್ರಹಿಸಿ ಮರುದೃಷ್ಟಿ ನೀಡಲು ಸಾಧ್ಯವಿದೆ ಎಂದು ತಿಳಿಸಿದರು.  

ನೇತ್ರದಾನವು ಜೀವಂತ ವ್ಯಕ್ತಿಯಿಂದ ಕಣ್ಣು ಪಡೆಯುವ ಪ್ರಕ್ರಿಯೆಯಲ್ಲ. ಇದು ಸಂಪೂರ್ಣವಾಗಿ ಮರಣೋತ್ತರ ದಾನವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.