ಹುಬ್ಬಳ್ಳಿ 29: ಪರಿಸರದಿಂದ ಋಣಮುಕ್ತರಾಗಬೇಕು ಅಂದರೆ ಪ್ರತಿಯೊಬ್ಬರು ಐದು ಸಸಿಗಳನ್ನು ನೆಡಬೇಕು ಮತ್ತು ಪೋಷಿಸಬೇಕು. ಸಸಿಗಳನ್ನು ನೆಡುವ ಕ್ರಮವನ್ನು ಸರಿಯಾಗಿ ಪಾಲಿಸಬೇಕು ಎಂದು ಹಸಿರು ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹೊಸಮನಿ ಹೇಳಿದರು.
ಅವರು ರೋಟರಿ ಕ್ಲಬ್ ಹುಬ್ಬಳ್ಳಿ-ಉತ್ತರ ವಲಯದ ವತಿಯಿಂದ ಅಕ್ಷಯ ಕಾಲೋನಿ 4ನೇ ಹಂತದ ಉದ್ಯಾನವನದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಬ್ಬಳ್ಳಿಯನ್ನು ಹಸಿರು ನಗರವನ್ನಾಗಿ ಮಾಡಲು ಎಲ್ಲರೂ ಪಣ ತೊಡಬೇಕು. ಆ ನಿಟ್ಟಿನಲ್ಲಿ ಹಸಿರು ಕರ್ನಾಟಕ ಸಂಸ್ಥೆ ಕಾರ್ಯ ಪ್ರವೃತ್ತವಾಗಿದೆ. ಸಸಿಗಳನ್ನು ನೆಡಲು ಗುಂಡಿ ತೆಗೆಯಲು ಸಹಕಾರಿಯಾಗುವ ಟ್ರಾಕ್ಟರ್ ನಮ್ಮಲಿದೆ. ಡಿಸೈಲ್ ಹಾಗೂ ಚಾಲಕನ ಭತ್ಯೆ ನೀಡಿ ಟ್ರಾಕ್ಟರ್ನ ಸದುಪಯೋಗ ಮಾಡಿಕೊಳ್ಳಲು ವಿನಂತಿಸಿದರು. ಸಸಿಗಳನ್ನು ನೆಡುವುದು ಎಷ್ಟು ಮುಖ್ಯವೊ ಅಷ್ಟೆ ಪ್ರಮುಖವಾದದ್ದು ಸಸಿಗಳನ್ನು ಸಂರಕ್ಷಿಸಿ, ಬೆಳೆಸುವುದು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಮಾತನಾಡಿ ಜಲ ಮೂಲ ಉಳಿಯಬೇಕಾದರೆ ಇದ್ದ ಕೆರೆಗಳ ಸರಂಕ್ಷಣೆ ಆಗಬೇಕು. ಹೊಸ ಕೆರೆಗಳನ್ನು ನಿರ್ಮಾಣ ಮಾಡುವ ಕಡೆಗೆ ಗಮನ ಹರಿಸಬೇಕು. ಮಳೆ ನೀರು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಇಂಗು ಗುಂಡಿಗಳನ್ನು ನಿರ್ಮಿಸಬೇಕು. ವಾಯು ಮಾಲಿನ್ಯ ತಡೆಗಟ್ಟಲು ನಮ್ಮ ಸುತ್ತಮೂತ್ತಲಿನ ಪರಿಸರದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು ಮತ್ತು ಪೋಷಿಸಬೇಕು ಎಂದರು.
ರೋಟರಿ ಕ್ಲಬ್ ಹುಬ್ಬಳ್ಳಿ-ಉತ್ತರ ವಲಯದ ಅಧ್ಯಕ್ಷ ಗಿರೀಶ ನಲವಡಿ ಸ್ವಾಗತಿಸಿದರು. ಕಾರ್ಯದರ್ಶಿ ಗಿರೀಶ ಪಾಟೀಲ ವಂದಿಸಿದರು. ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ರಮೇಶ ಪೂಜಾರ, ಎಜಿ ದೀಪಕ ಪಾಟೀಲ, ಬಿ.ಬಿ.ಪಾಟೀಲ, ಪ್ರವೀಣ ಹೆಬಸೂರ, ವಿಜಯ ಹಟ್ಟಿಹೋಳಿ, ಮನೋಹರ ಕೊಟ್ಟೂರಶೆಟ್ಟರ, ರಾಜೇಶ ತೋಳಣ್ಣವರ, ವಿನಾಯಕ ಭಟ್, ಡಾ. ಪ್ರಕಾಶ ನಿಡವಣಿ, ರಾಜೇಶ ಕೆ. ಸಿಂಗ್, ಶಿವಾನಂದ ಮಾದರ, ಡಾ. ಶಂಕರ ಯಾದವಾಡ, ದೀಪಕ ಸಬರದ, ಅಕ್ಷಯ ಕಾಲೋನಿಯ ಅಧ್ಯಕ್ಷ ಹೇಮಂತ ಬೆಲ್ಲದ, ಕಾರ್ಯದರ್ಶಿ ಅಶೋಕ ಸೋಮಾಪುರ, ರಾಜೇಶ ಮಗದುಮ್, ದತ್ತಾ ಕುಲಕರ್ಣಿ, ಆನಂದ ಘಟಪನದಿ, ಇನ್ನರವೀಲ್ ಕ್ಲಬ್ನ ಅಧ್ಯಕ್ಷ ಶೃತಿ ಹೆಬಸೂರ, ಕಾರ್ಯದರ್ಶಿ ಪ್ರಿಯದರ್ಶನಿ ಕೊಟ್ಟೂರಶೆಟ್ಟರ, ರಾಮ ಮೋಹನ, ಶಂಕರ ಹಿರೇಮಠ, ಇತರರು ಇದ್ದರು.
ಗಿರೀಶ ನಲವಡಿ ಅವರ ನೇತೃತ್ವದಲ್ಲಿ 40ಕ್ಕೂ ಹೆಚ್ಚು ರೋಟರಿ ಸದಸ್ಯರು ಭಾಗವಹಿಸಿ ಉದ್ಯಾನವನದಲ್ಲಿ 30ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.