ಏಡ್ಸ್‌ ಕಟ್ಟಿ ಹಾಕುವ ಹೊಣೆ ಎಲ್ಲರದ್ದು: ಸುಬೇದಾರ

Everyone's responsibility to contain AIDS: Subedar

ಲೋಕದರ್ಶನ ವರದಿ 

ಏಡ್ಸ್‌ ಕಟ್ಟಿ ಹಾಕುವ ಹೊಣೆ ಎಲ್ಲರದ್ದು: ಸುಬೇದಾರ 


ಬಾಗಲಕೋಟೆ 20: ಏಡ್ಸ್‌ ವಾಸಿಯಾಗದ ಖಾಯಿಲೆಯಾಗಿದ್ದು ಯುವಶಕ್ತಿ ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ ಅದರ ಕುರಿತು ಮುನ್ನೆಚ್ಚರಿಕೆ ಕ್ರಮವಹಿಸುವುದು ಅಗತ್ಯ ಎಂದು ಬಿಎಸಿಟಿಯು ಜಿಲ್ಲಾ ಮೇಲ್ವಿಚಾರಕ ಮಲ್ಲನಗೌಡ ಸುಬೇದಾರ ಹೇಳಿದರು. 

ನಗರದ ಬಿಬಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಎನ್‌.ಎಸ್‌.ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡ ಎಚ್‌ಐವಿ ಮತ್ತು ಏಡ್ಸ್‌ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 44ಸಾವಿರ ಜನ ಸೋಂಕಿತರಿದ್ದಾರೆ.  ಸೋಂಕಿತರ ಸಂಖ್ಯೆಯಲ್ಲಿ ಬಾಗಲಕೋಟೆಯು ಮೊದಲ ಸ್ಥಾನದಲ್ಲಿದ್ದು ಅದರ ವಿರುದ್ಧ ಹೋರಾಡಲು ಪ್ರತಿಯೊಬ್ಬರು ಸನ್ನದ್ಧರಾಗಬೇಕು. ಬೇಜವಾಬ್ದಾರಿ ದುಡುಕು ಸ್ವಭಾವದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಎಚ್‌.ಐ.ವಿ ಹರಡುವ ಮಾರ್ಗಗಳ ಕುರಿತು ಸಮಾಜದಲ್ಲಿ ಜಾಗೃತಿ ನೀಡಬೇಕು ಎಂದರು. 

 2030ರ ವೇಳೆಗೆ ಸಂಪೂರ್ಣ ಏಡ್ಸ್‌ ನಿವಾರಣೆ ಮಾಡಲು ಸರಕಾರ ಗುರಿ ಇಟ್ಟುಕೊಂಡಿದ್ದು ಅದರ ಯಶಸ್ಸು ಯುವ ಶಕ್ತಿಯ ಕೈಯಲ್ಲಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್‌ಐವಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಇದರ ಕುರಿತು ಯುವಶಕ್ತಿ ಎಚ್ಚರಿಕೆ ವಹಿಸುವುದು ಅನಿವಾರ್ಯ. ಸೋಂಕಿತರನ್ನು ಸಮಾಜದಲ್ಲಿ ಕಳಂಕಿತರನ್ನಾಗಿ ಕಾಣುವ ತಾರತಮ್ಯ ವ್ಯವಸ್ಥೆ ಇದ್ದು ಇದು ಬದಲಾಗಬೇಕು. ಸೋಂಕಿತರಿಗೆ ಸರಕಾರ ಉಚಿತವಾಗಿ ಎಆರ್‌ಟಿ ಮಾತ್ರೆಗಳನ್ನು ನೀಡುತ್ತಿದೆ ಎಂದರು. 

ಪ್ರಾಚಾರ್ಯ ಎಸ್‌.ಆರ್ ಮುಗನೂರಮಠ ಮಾತನಾಡಿ ಆರೋಗ್ಯವು ಅತ್ಯಮೂಲ್ಯ ಭಾಗ್ಯವಾಗಿದ್ದು ಅದನ್ನು ಕಾಯ್ದುಕೊಳ್ಳುವುದು ಮುಖ್ಯ. ದೇಶದಲ್ಲಿ ಹೆಲ್ತ್‌ ಟೂರಿಸಂ ಪರಿಕಲ್ಪನೆ ಶುರುವಾಗಿದ್ದು ಉತ್ತಮ ಚಿಕಿತ್ಸೆಗಾಗಿ ಹುಡುಕಿ ಹೋಗುವ ವ್ಯವಸ್ಥೆ ನಿರ್ಮಾಣವಾಗಿದೆ. ಉತ್ತಮ ಆಹಾರ ಮತ್ತು ಜೀವನ ಶೈಲಿಯನ್ನು ರೂಡಿಸಿಕೊಳ್ಳುವುದರಿಂದ ಅತ್ಯುತ್ತಮ ಜೀವನ ನಡೆಸಲು ಸಾಧ್ಯ. ಯುವಕರು ದುಷ್ಚಟಗಳಿಗೆ ಬಲಿಯಾಗದೆ ಮಾದರಿ ವ್ಯಕ್ತಿಗಳಾಗಬೇಕು ಇದರ ಹೊಣೆ ಪಾಲಕರದ್ದೂ ಇದೆ. ಜೀವನದಲ್ಲಿ ಮಾನವೀಯ ಸಂಬಂಧಗಳು ಅತ್ಯವಶ್ಯವಾಗಿದ್ದು ಅವುಗಳನ್ನು ಕಾಪಾಡಿಕೊಳ್ಳಲು ನಾವು ಮಾರಕ ಸೋಂಕುಗಳಿಂದ ದೂರ ಉಳಿಯಬೇಕು. ರಕ್ತಧಾನ ಜೀವಧಾನವಾಗಿದ್ದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತಧಾನ ಮಾಡಬಹುದು. ನೇತ್ರಧಾನ, ಅಂಗಾಂಗ ಧಾನಗಳು ಮುಖ್ಯವಾಗಿದ್ದು ಧಾನ ಮಾಡಲು ಇಚ್ಚಿಸುವವರು ನೋಂದಣಿ ಮಾಡಬಹುದಾಗಿದೆ ಎಂದರು.  

ಎಚ್‌ಐವಿ ಎಡ್ಸ್‌ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕಾಧಿಕಾರಿ ಡಾ.ಎಮ್‌.ಎಚ್ ವಡ್ಡರ, ಮಹಾವಿದ್ಯಾಲಯದ ಪ್ರಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.