ಕೇಜ್ರಿವಾಲ್ ಸ್ಪರ್ಧಿಸಿರುವ ಪ್ರತಿಷ್ಠಿತ ನವದೆಹಲಿ ವಿಧಾನಸಭಾ ಕ್ಷೇತ್ರದತ್ತ ಎಲ್ಲರ ಚಿತ್ತ

ನವದೆಹಲಿ, ಜನವರಿ 28, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಬಿಜೆಪಿಯ ದೆಹಲಿ ಘಟಕದ ಯುವ ಮೋರ್ಚಾ ಮುಖ್ಯಸ್ಥ ಸುನಿಲ್  ಯಾದವ್, ಕಾಂಗ್ರೆಸ್ ನ ರೋಮೇಶ್  ಸಭರ್ವಾಲ್ ಸರ್ಧಿಸಿರುವ ನವದೆಹಲಿ ವಿಧಾನಸಭಾ ಕ್ಷೇತ್ರದ ಮೇಲೆ ಇದೀಗ ಎಲ್ಲರ ದೃಷ್ಟಿ ಕೇಂದ್ರೀಕೃತವಾಗಿದೆ.ದೆಹಲಿಯ  ಹೃದಯಭಾಗದಲ್ಲಿರುವ ಪ್ರತಿಷ್ಠಿತ ಕ್ಷೇತ್ರದಿಂದ ಈ ಹಿಂದೆ ಜನಪ್ರಿಯ ಮುಖ್ಯಮಂತ್ರಿಗಳಾದ  ಶೀಲಾ ದೀಕ್ಷಿತ್ ಮತ್ತು ಅರವಿಂದ್ ಕೇಜ್ರಿವಾಲ್ ಗೆದ್ದಿದ್ದರು.

ಫೆಬ್ರವರಿ 8ರಂದು ನಡೆಯುವ ಚುನಾವಣೆಗೆ ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ  ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು 28 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅದರಲ್ಲಿ 26 ಪುರುಷ ಮತ್ತು ಇಬ್ಬರು ಮಹಿಳಾ  ಅಭ್ಯರ್ಥಿಗಳಿದ್ದಾರೆ.ಕೇಜ್ರಿವಾಲ್  ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದಾರೆ, ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ದಿವಂಗತ ಶೀಲಾ ದೀಕ್ಷಿತ್ ಅವರನ್ನು 2013 ರಲ್ಲಿ ಕೇಜ್ರಿವಾಲ್ ಸೋಲಿಸಿದ್ದರು.

ದೆಹಲಿಯ  ಹೃದಯಭಾಗದಲ್ಲಿರುವ ನವದೆಹಲಿ ಕ್ಷೇತ್ರವು ರಾಷ್ಟ್ರಪತಿ ಭವನ, ಸಂಸತ್ತು, ಪ್ರತಿಷ್ಠಿತ ಬಂಗಲೆಗಳು, ಗಾಲ್ಫ್ ಲಿಂಕ್, ಜೋರ್ ಬಾಗ್ ಮತ್ತು ಲೋಧಿ ರಸ್ತೆ ಮತ್ತಿತರ ಪ್ರಮುಖ ಕಟ್ಟಡ ಮತ್ತು ಸ್ಥಳಗಳನ್ನು ಒಳಗೊಂಡಿದೆ. 2013 ರ ದೆಹಲಿ  ವಿಧಾನಸಭಾ ಚುನಾವಣೆಯಲ್ಲಿ, ಕೇಜ್ರಿವಾಲ್ ಅವರು 53.46 ಶೇಕಡಾ ಮತಗಳನ್ನು ಗಳಿಸಿದ್ದರೆ, ದೀಕ್ಷಿತ್ 22.23 ಶೇಕಡಾ ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದ್ದರು. ಮೂರನೇ  ಸ್ಥಾನದಲ್ಲಿದ್ದ ಬಿಜೆಪಿಯ ವಿಜೇಂದರ್ ಗುಪ್ತಾ 21.68 ಶೇಕಡಾ ಮತಗಳನ್ನು ಪಡೆದಿದ್ದರು. ಬಳಿಕ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದರು. ಆದರೆ 49 ದಿನಗಳ ನಂತರ ರಾಜೀನಾಮೆ ನೀಡಿದ್ದರು.

2015 ರಲ್ಲಿ ನಡೆದ  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ, ಕೇಜ್ರಿವಾಲ್ ಅವರು ಎರಡನೇ ಬಾರಿಗೆ ಇದೇ ಕ್ಷೇತ್ರದಿಂದ ಗೆದ್ದು, ಶೇಕಡಾ 64.34 ಮತಗಳನ್ನು ಪಡೆದರು. ಎಎಪಿ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರು ಬಿಜೆಪಿಯ ನೂಪುರ್ ಶರ್ಮಾ ಮತ್ತು ಕಾಂಗ್ರೆಸ್‌ನ ಕಿರಣ್ ವಾಲಿಯಾ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದರು.ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಅಧಿಕಾರಿಗಳು ಮತ್ತು ವ್ಯಾಪಾರಿಗಳಾಗಿದ್ದಾರೆ.ಕ್ಷೇತ್ರದಲ್ಲಿ 79,047 ಪುರುಷರು ಮತ್ತು 65,461 ಮಹಿಳೆಯರು ಸೇರಿದಂತೆ 1.44 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.

2008 ರಲ್ಲಿ, ಶೀಲಾ ದೀಕ್ಷಿತ್ ಈ ಕ್ಷೇತ್ರದಿಂದ ಶೇ 52.20 ರಷ್ಟು ಮತಗಳನ್ನು ಗಳಿಸಿ ಬಿಜೆಪಿಯ ವಿಜಯ್ ಜಾಲಿಯನ್ನು ಸೋಲಿಸಿದ್ದರು. ವಿಜಯ್ ಅವರು 33.85 ಶೇಕಡಾ ಮತಗಳನ್ನು ಗಳಿಸಿದ್ದರು.2015 ರಲ್ಲಿ ನಡೆದ  ಕೊನೆಯ ವಿಧಾನಸಭಾ ಚುನಾವಣೆಯಲ್ಲಿ, ಎಎಪಿ ವಿಜಯಶಾಲಿಯಾಗಿ ಹೊರಹೊಮ್ಮಿತು ಮತ್ತು ಸ್ಪಷ್ಟ  ಜನಾದೇಶವನ್ನು ಪಡೆಯಿತು, ಎಎಪಿ 70 ವಿಧಾನಸಭಾ ಸ್ಥಾನಗಳಲ್ಲಿ 67 ಸ್ಥಾನಗಳನ್ನು  ಗೆದ್ದುಕೊಂಡಿತ್ತುಈ ವರ್ಷದ ದೆಹಲಿ ವಿಧಾನಸಭಾ ಚುನಾವಣೆಗೆ ಮತ ಎಣಿಕೆ ಫೆಬ್ರವರಿ 11 ರಂದು ನಡೆಯಲಿದೆ.