ನಿತ್ಯವೂ ಈ ಹಸಿರು ಸ್ವಯಂ ಸೇವಕರಿಗೆ ಪರಿಸರ ದಿನ! ಗಿಡ ನೆಟ್ಟು, ದತ್ತು ನೀಡುವ ವೀರ ಸಾವರಕರ ಗೆಳೆಯರ ಬಳಗ

ಧಾರವಾಡ, 20: ಇಲ್ಲಿನ ಮಾಳಮಡ್ಡಿ ಬಡಾವಣೆಯ ವನವಾಸಿ ರಾಮಮಂದಿರ ರಸ್ತೆಯ ಪರಿಸರ ಸ್ವಯಂ ಸೇವಕರಿಗೆ ಕೇವಲ ಜೂನ್ 5 ಮಾತ್ರ ಪರಿಸರ ದಿನವಲ್ಲ; ಬದಲಾಗಿ, ವರ್ಷದ 365 ದಿನಗಳೂ ಪರಿಸರ ದಿನವೇ! 

ವೀರ ಸಾವರಕರ ಗೆಳೆಯರ ಬಳಗ ಸಾಮುದಾಯಿಕ ಸಹಭಾಗಿತ್ವದಲ್ಲಿ ಪರಿಸರ ಕಾಳಜಿ ಅರಳಿಸಿದ ಪ್ರಯತ್ನವಿದು. ಅನುಕರಣೀಯ ಯೋಗ್ಯ ಮಾದರಿಯೂ ಹೌದು. ಹಸಿರು ಆವರಣ ಜನರ ಕಾಳಜಿಯಿಂದಲೇ ಪಸರಿಸಿದ ಚೇತೋಹಾರಿ ನೆರಳು ಚೆಲ್ಲಿದ ಬೆರಗು! 

ವಿಷ್ಣು ಹುಕ್ಕೇರಿ, ರಾಘವೇಂದ್ರ ಶೆಟ್ಟಿ, ಗುರುದತ್ತ ದೇಶಪಾಂಡೆ, ಅರುಣಕುಮಾರ ಶೀಲವಂತ, ಲಕ್ಷ್ಮಣ ಹೂಗಾರ ಹಾಗೂ ಪ್ರಭಾಕರ ದೇಶಪಾಂಡೆ ಸೇರಿದಂತೆ, ಸ್ಥಳೀಯ ಪೌರ ಕಾರ್ಮಿಕರೂ ಸಹ ರಸ್ತೆ ಬದಿಗಳ ವೃಕ್ಷ ಸಂರಕ್ಷಕರು! 

ಕಿರಾಣಿ ಅಂಗಡಿ, ಪಾನ್-ಬೀಡಾ ಗೂಡಂಗಡಿ, ಹೋಟೆಲ್, ಬೇಕರಿ ಅಂಗಡಿಕಾರರು, ಆಸ್ಪತ್ರೆ, ಬೀದಿ ಬದಿಗಿನ ವ್ಯಾಪಾರಸ್ಥರು, ವಸ್ತ್ರ ಭಾಂಡಾರ, ಮನೆಗಳವರು.. ಹೀಗೆ ಓಣಿ ಕೂಸುಗಳಾದ `ಸಸ್ಯಗಳ' ಧ್ಯೇಯನಿಷ್ಠ ಪಾಲಕರು! ಎಲ್ಲ 40 ಗಿಡಗಳನ್ನೂ ದತ್ತು ನೀಡಲಾಗಿದೆ! ಗಿಡ ದತ್ತು ಪಡೆದವರೇ ಸಂಪೂರ್ಣ ಹೊಣೆಗಾರರು!

ದಾನಿಗಳಿಂದ ಸಸಿಗಳ ಪಡೆಯುವಿಕೆ, ಸಸಿ ನೆಡಲು ಶ್ರಮದಾನ, ನಿತ್ಯ ನಿರ್ವಹಣೆ ವ್ಯವಸ್ಥೆ, ಪರಿಸರವಾದಿ ಓಸ್ವಾಲ್ ಅವರಿಂದ 'ಟ್ರೀ ಗಾರ್ಡ' ಸಹಾಯ.. ಹೀಗೆ, ಮನೆಯ ಮಗುವಿನಂತೆ ಅಕ್ಕರೆ ಮತ್ತು ಕಕ್ಕುಲಾತಿಯಿಂದ ಗಿಡಗಳನ್ನು ಪೋಷಿಸುವ ರೀತಿ ನಿಜಕ್ಕೂ ಅಭಿನಂದನೀಯ. 20 ಗಿಡಗಳು ಈಗ ಮರಗಳಾಗಿ ಭಡ್ತಿ ಪಡೆದಿದ್ದರಿಂದ, ಕೇವಲ 20 ಸಸಿಗಳಿಗೆ ಮಾತ್ರ ಈಗ ಟ್ರೀ ಗಾರ್ಡ ರಕ್ಷಣೆ ಗೆಳೆಯರ ಬಳಗ ಒದಗಿಸಿದೆ. ಪ್ರತಿ ಪರಿಸರ ದಿನದಂದು ಕೇವಲ 5 ಗಿಡ ಮಾತ್ರ ನೆಟ್ಟು, ವರ್ಷ ಪೂರ್ತಿ  ಎಲ್ಲರೂ ಸೇರಿ ನಿರ್ವಹಿಸುವ ಹೊಸ ಪಾಠ ಕಲಿಸುತ್ತಿದ್ದಾರೆ.. ನಮಗೆ! 

ಇಲ್ಲಿಯ ವರೆಗೆ ಅಂದಾಜು 10 ಸಾವಿರ ರೂಪಾಯಿ ಖರ್ಚಾಗಿರಬಹುದು. ಲೆಕ್ಕಿಸಲಾಗದ ಲಕ್ಷಾಂತರ ರೂಪಾಯಿಗಳಷ್ಟು ಮೌಲ್ಯದ ನಗರ ವನ ಸಂಪತ್ತು, ನೆರಳು, ಹಣ್ಣು-ಹೂವು ಈ ಮರಗಳು ಹೊದ್ದು ನಿಂತಿವೆ. 

ಪರಿಸರವನ್ನು ತಾಳಿಕೆ-ಬಾಳಿಕೆ ಬರುವಂತೆ ಪೋಷಿಸುವ ಪ್ರಯತ್ನದ ಪೀಠವಾಕ್ಯವೆಂದರೆ, ಜಾಗತಿಕವಾಗಿ ಚಿಂತನೆ ಮಾಡು; ಸ್ಥಳೀಯವಾಗಿ, ವಯಕ್ತಿಕ ಶಕ್ತ್ಯಾನುಸಾರ ಕೆಲಸ ಮಾಡು! ಈ ಮಾತಿಗೆ ಅನ್ವರ್ಥವಾಗಿ ಕಾಯಕ ರೂಪ ನೀಡಿದ, ವೀರ ಸಾವರಕರ ಗೆಳೆಯರ ಬಳಗ ನಿಜಕ್ಕೂ ಅಭಿನಂದನೀಯ. 

************************************************************************************** 

ಅನಿಸಿಕೆ  

ನಮ್ಮ ಹಿರೀಕರು ನಮಗೆ ಬದುಕಲು ಯೋಗ್ಯವಾದ ಪರಿಸರ ನೀಡಿ ಹೋದವರು. ನಮ್ಮ ಪೀಳಿಗೆ ತನ್ನ ಪಾಲಿಂದು ಮಾತ್ರವಲ್ಲ, ಮುಂದಿನ ಪೀಳಿಗೆಯದ್ದೂ ಸಾಲ ಪಡೆದು ತೀರಿಸಿದ್ದಾಗಿದೆ! ನಮ್ಮ ಮಕ್ಕಳ ಭವಿಷ್ಯ ಮತ್ತು ಬದುಕು ಕರಾಳವಾಗದಿರಲು ಸ್ಥಳೀಯ ಮಟ್ಟದಲ್ಲಿ ಸಾಂಘಿಕ ಪ್ರಯತ್ನಗಳು ನಡೆಯಬೇಕಿವೆ. ಪರಿಸರ ಸ್ನೇಹಿ ಮತ್ತು ಸರಳ ಬದುಕು ನಮ್ಮ ಆದ್ಯತೆಗಳಾಗಬೇಕಿದೆ. 

- ವಿಷ್ಣು ಹುಕ್ಕೇರಿ, ಸದಸ್ಯ, ವೀರ ಸಾವರಕರ ಗೆಳೆಯರ ಬಳಗ, ಧಾರವಾಡ. 

**************************************************************************************

ಬಾಕ್ಸ್ 

ಅಂಗಡಿಕಾರರಿಗೆ, ವ್ಯಾಪಾರಸ್ಥರಿಗೆ ಮನೆಯವರಂತೆ ಹಲವು ಅನುಕೂಲತೆಗಳಿವೆ. ಮನೆ ಅಂಗಳದ ಕಿಚನ್ ಗಾರ್ಡನ್ ಬೆಳೆಸಿದಂತೆ, ನಾವೂ ನಿತ್ಯ ಅಂಗಡಿ ಮುಂದಿನ ಗಿಡ ಪೋಷಣೆ ಮಾಡಲು ಸಾಧ್ಯವಿದೆ. ಗಿಡ ನೆಟ್ಟರೆ ಮುಗಿಯುವುದಿಲ್ಲ; ನಿರ್ವಹಿಸುವ ಜವಾಬ್ದಾರಿ ಹೊರಬೇಕಾಗಿರುವುದು ಎಲ್ಲರಿಗೂ ಅರ್ಥವಾಗಬೇಕಿದೆ. 

- ರಾಘವೇಂದ್ರ ಶೆಟ್ಟಿ, ಶ್ರೀ ದೇವಿ ರಿಫ್ರೆಷ್ಮೆಂಟ್ಸ್, 'ತಟ್ಟೆ ಇಡ್ಲಿ ರೈಲ್ವೆ ನಿಲ್ದಾಣದ ಬಳಿ, ಧಾರವಾಡ. 

**************************************************************************************

ಚಿತ್ರ ಶಿರ್ಷಿಕೆ: 

ವೀರ ಸಾವರಕರ ಗೆಳೆಯರ ಬಳಗದ ಸದಸ್ಯರು ಮಾಳಮಡ್ಡಿಯ ವನವಾಸಿ ರಾಮ ಮಂದಿರ ರಸ್ತೆಯಲ್ಲಿ ನೆಟ್ಟು ಪೋಷಿಸುತ್ತಿರುವ ಮರಗಳು.